Top Newsರಾಜ್ಯ

ತುಮಕೂರು : ಗ್ರಾಮಸ್ಥರ ಹೆಸರಿನಲ್ಲಿ ಸಾಲ‌‌ ಪಡೆದು ದಂಪತಿ ಪರಾರಿ : ಜನರಿಗೆಲ್ಲ ಟೋಪಿ ಹಾಕಿದ ಜೋಡಿ

ತುಮಕೂರು: ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳ ಹಾವಳಿ ಹೆಚ್ಚಾಗಿದ್ದು ಕೆಲವು ಊರುಗಳಲ್ಲಿ ಜನರು ಮನೆಯನ್ನೇ ಬಿಟ್ಟು ಓಡಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಕಿರುಕುಳದ ಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತಿರುವ ಹೊತ್ತಲ್ಲೇ ತುಮಕೂರು ಜಿಲ್ಲೆಯಲ್ಲಿ ಕಿಲಾಡಿ ದಂಪತಿ ಮೈಕ್ರೋ ಫೈನಾನ್ಸ್‌ನಿಂದ ಸಾಲ ಪಡೆದು ಪರಾರಿಯಾದ ಆರೋಪ ಕೇಳಿ ಬಂದಿದೆ.

ಇದರ ನಡುವೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಹೋಬಳಿಯ ದೊಡ್ಡಹೊಸಳ್ಳಿ ಗ್ರಾಮದಲ್ಲಿ ಸ್ವಲ್ಪ ವಿಭಿನ್ನ ಘಟನೆ ನಡೆದಿದೆ. ಗ್ರಾಮಸ್ಥರ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಪಡೆದು ಚಾಲಾಕಿ ದಂಪತಿ ಪರಾರಿಯಾಗಿದೆ.

ಪ್ರತಾಪ್ ಹಾಗೂ ರತ್ನಮ್ಮ ಎನ್ನುವ ದಂಪತಿ ಜನರಿಗೆ ಟೋಪಿ ಹಾಕಿ ಪರಾರಿಯಾಗಿದ್ದಾರೆ. ಸುಮಾರು 35 ಮಂದಿಯ ಆಧಾರ್ ಕಾರ್ಡ್ ಪಡೆದು ವಂಚನೆ ನಡೆಸಿದ್ದಾರೆ. 10 ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್ ಕಂಪನಿಯಿಂದ 50 ಲಕ್ಷಕ್ಕೂ ಹೆಚ್ಚು ಸಾಲ ಪಡೆದಿದ್ದಾರೆ. ಜನರ ಹೆಸರಲ್ಲಿ ತಾವೇ ಸಾಲ ಮಂಜೂರು ಮಾಡಿಕೊಂಡು, ತಾವೇ ಸಾಲದ ಹಣ ಕಟ್ಟುತ್ತೇವೆ ಎಂದು ಪಂಗನಾಮ ಹಾಕಿದ್ದಾರೆ.

ಹಲವು ಮೈಕ್ರೋ ಫೈನಾನ್ಸ್ ನವರ ಜೊತೆ ಒಡನಾಟ ಇಟ್ಟುಕೊಂಡಿದ್ದ ಈ ಖತರ್ನಾಕ್ ದಂಪತಿ, ಸಖತ್ ಪ್ಲ್ಯಾನ್ ಮಾಡಿಯೇ ಈ ರೀತಿ ಮೋಸ ಮಾಡಿದ್ದಾರೆ. ಇದೀಗ ಸಾಲ ಮರುಪಾವತಿ ಮಾಡುವಂತೆ ಗ್ರಾಮಸ್ಥರಿಗೆ ನೋಟಿಸ್ ನೀಡಲಾಗಿದೆ. ಕಳೆದ 2 ತಿಂಗಳ ಹಿಂದೆಯೆ ಪ್ರತಾಪ್ ಮತ್ತು ರತ್ನಮ್ಮ ಪರಾರಿಯಾಗಿದ್ದಾರೆ. ಸದ್ಯ ಹಣ ಕಟ್ಟುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಗ್ರಾಮಸ್ಥರ ಹಿಂದೆ ಬಿದ್ದಿದ್ದಾರೆ.

Comments (0)

Your email address will not be published. Required fields are marked *

Back to top button