ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು 75ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಟ್ರಂಪ್ ಶುಭಾಶಯಕ್ಕೆ ಮೋದಿ ಧನ್ಯವಾದ ತಿಳಿಸಿದ್ದಾರೆ. ಭಾರತ-ಅಮೆರಿಕ ಸಂಬಂಧಗಳನ್ನು ಉತ್ತಮಗೊಳಿಸುವ ಬದ್ಧತೆ ಮತ್ತು ಉಕ್ರೇನ್ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ಅಮೆರಿಕದ ನಿಲುವಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಪ್ರಧಾನಿ ಒತ್ತಿ ಹೇಳಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಟ್ರಂಪ್, ನನ್ನ ಸ್ನೇಹಿತ ನರೇಂದ್ರ ಮೋದಿಗೆ ಫೋನ್ ಕರೆ ಮಾಡಿ ಜನ್ಮದಿನದ ಶುಭಾಶಯಗಳನ್ನು ಕೋರಿದೆ. ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸುವಲ್ಲಿ ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದಿದ್ದಾರೆ.
ಭಾರತದ ಮೇಲೆ ಅಮೆರಿಕವು ಭಾರೀ ವ್ಯಾಪಾರ ಸುಂಕಗಳನ್ನು ವಿಧಿಸಿರುವ ಹೊತ್ತಿನಲ್ಲೇ ಪ್ರಧಾನಿ ಮೋದಿ ಅವರಿಂದ ಈ ಸಂದೇಶ ಬಂದಿದೆ. ಭಾರತದ ಆಮದುಗಳ ಮೇಲೆ ಶೇ.50 ರಷ್ಟು ಸುಂಕವನ್ನು ವಿಧಿಸಲಾಗಿದೆ. ರಷ್ಯಾದ ತೈಲ ಖರೀದಿ ಹಿನ್ನೆಲೆ ಶೇ.25 ರಷ್ಟು ಸುಂಕವನ್ನು ಭಾರತಕ್ಕೆ ಅಮೆರಿಕ ವಿಧಿಸಿದೆ. ಇದು ವಿಶ್ವದ ಯಾವುದೇ ದೇಶದ ಮೇಲೆ ವಿಧಿಸಲಾದ ಅತ್ಯಧಿಕ ಸುಂಕಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೇ, ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರು, ಅಮೆರಿಕದಲ್ಲಿ ಬೆಳೆದ ಜೋಳವನ್ನು ಖರೀದಿಸಲು ನಿರಾಕರಿಸಿದರೆ ಭಾರತವು ಅಮೆರಿಕ ಮಾರುಕಟ್ಟೆಗೆ ತನ್ನ ಪ್ರವೇಶವನ್ನು ಕಳೆದುಕೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.


