ವಾಷಿಂಗ್ಟನ್: ಗ್ರೀನ್‌ಲ್ಯಾಂಡ್ ದ್ವೀಪವನ್ನು ಅಮೆರಿಕದ ಸುಪರ್ದಿಗೆ ಪಡೆಯುವ ತನ್ನ ಮಹತ್ವಾಕಾಂಕ್ಷೆಯ ಯೋಜನೆಗೆ ಅಡ್ಡಿಪಡಿಸುತ್ತಿರುವ ಯುರೋಪಿಯನ್ ರಾಷ್ಟ್ರಗಳ ವಿರುದ್ಧ ಡೊನಾಲ್ಡ್ ಟ್ರಂಪ್ ಸಮರ ಸಾರಿದ್ದಾರೆ. ಈ ಸಂಬಂಧ ಡೆನ್ಮಾರ್ಕ್, ಯುಕೆ ಮತ್ತು ಫ್ರಾನ್ಸ್ ಸೇರಿದಂತೆ ಹಲವು ದೇಶಗಳ ಉತ್ಪನ್ನಗಳ ಮೇಲೆ ಫೆಬ್ರವರಿ 1 ರಿಂದ ಅನ್ವಯವಾಗುವಂತೆ ಶೇ. 10 ರಷ್ಟು ಸುಂಕ (Tariff) ವಿಧಿಸುವುದಾಗಿ ಘೋಷಿಸಿದ್ದಾರೆ.
ತನ್ನ ಅಧಿಕೃತ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಟ್ರಂಪ್, “ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕಕ್ಕೆ ಸಂಪೂರ್ಣವಾಗಿ ಹಸ್ತಾಂತರಿಸಲು ಜೂನ್ 1 ರೊಳಗೆ ಒಪ್ಪಂದ ಮಾಡಿಕೊಳ್ಳದಿದ್ದರೆ, ಪ್ರಸ್ತುತ ವಿಧಿಸಲಾಗಿರುವ ಸುಂಕವನ್ನು ಶೇ. 25ಕ್ಕೆ ಹೆಚ್ಚಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೊಸ ಆರ್ಥಿಕ ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ.
ಟ್ರಂಪ್ ಅವರ ಈ ನಡೆಗೆ ಯುರೋಪಿಯನ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಗ್ರೀನ್‌ಲ್ಯಾಂಡ್‌ನ ಭವಿಷ್ಯದ ಬಗ್ಗೆ ನಿರ್ಧರಿಸುವ ಹಕ್ಕು ಕೇವಲ ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ಗೆ ಮಾತ್ರ ಸೇರಿದ್ದು” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ಡೆನ್ಮಾರ್ಕ್ ತನ್ನ ಮಿತ್ರರಾಷ್ಟ್ರಗಳ ನೆರವಿನೊಂದಿಗೆ ಗ್ರೀನ್‌ಲ್ಯಾಂಡ್‌ನಲ್ಲಿ ಮಿಲಿಟರಿ ಬಲವರ್ಧನೆ ಮಾಡುವುದಾಗಿ ತಿಳಿಸಿತ್ತು. ಫ್ರೆಂಚ್ ಸಶಸ್ತ್ರ ಪಡೆಗಳ ಸಚಿವೆ ಆಲಿಸ್ ರುಫೊ ಅವರು, “ಇದು ನಮ್ಮ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳುವ ಸಂಕೇತ” ಎಂದು ಟ್ರಂಪ್‌ಗೆ ಟಾಂಗ್ ನೀಡಿದ್ದಾರೆ.
ಗ್ರೀನ್‌ಲ್ಯಾಂಡ್ ಮೇಲೆ ಟ್ರಂಪ್ ಕಣ್ಣು?
ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಹಿಂದೆ ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿ ಅಡಗಿದೆ ಎಂಬುದು ಟ್ರಂಪ್ ವಾದ.
ಖನಿಜ ಸಂಪತ್ತು: ಗ್ರೀನ್‌ಲ್ಯಾಂಡ್ ಅಪಾರ ಖನಿಜ ಸಂಪತ್ತನ್ನು ಹೊಂದಿದೆ.
ರಷ್ಯಾ-ಚೀನಾ ತಡೆ: ಚೀನಾ ಮತ್ತು ರಷ್ಯಾ ಈ ಪ್ರಮುಖ ಪ್ರದೇಶದ ಮೇಲೆ ಹಿಡಿತ ಸಾಧಿಸುವುದನ್ನು ತಪ್ಪಿಸಲು ಅಮೆರಿಕ ಇಲ್ಲಿ ನೆಲೆ ಸ್ಥಾಪಿಸುವುದು ಅನಿವಾರ್ಯ ಎಂಬುದು ರಿಪಬ್ಲಿಕನ್ ನಾಯಕರ ಸಮರ್ಥನೆ.
ಯುರೋಪಿಯನ್ ರಾಷ್ಟ್ರಗಳು ಮಿಲಿಟರಿ ಉಪಸ್ಥಿತಿ ಹೆಚ್ಚಿಸಿದರೂ, ತನ್ನ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶ್ವೇತಭವನ ಕಡಾಖಂಡಿತವಾಗಿ ಹೇಳಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಅಮೆರಿಕ ಮತ್ತು ಯುರೋಪ್ ನಡುವಿನ ಸಂಬಂಧ ಮತ್ತಷ್ಟು ಹದಗೆಡುವ ಸಾಧ್ಯತೆ ದಟ್ಟವಾಗಿದೆ.,ಲನಜ


