ಸಿನಿಮಾ : ನಟಿಯರನ್ನು ಬಹಳ ಸುಲಭವಾಗಿ ಟಾರ್ಗೆಟ್ ಮಾಡಲಾಗುತ್ತದೆ. ಸಿನಿಮಾ ಕಲಾವಿದೆಯರ ಬಗ್ಗೆ ಅನೇಕರು ಕೆಟ್ಟದಾಗಿ ಮಾತನಾಡುತ್ತಾರೆ. ಒಂದಷ್ಟು ದಿನಗಳ ಹಿಂದೆ ಖ್ಯಾತ ನಟಿ ತ್ರಿಶಾ ಕೃಷ್ಣನ್ ಬಗ್ಗೆ ನಟ ಮನ್ಸೂರ್ ಅಲಿ ಖಾನ್ ಅಸಭ್ಯವಾಗಿ ಮಾತನಾಡಿದ್ದರು. ಈಗ ತಮಿಳುನಾಡಿನಲ್ಲಿ ರಾಜಕೀಯ ಮುಖಂಡ ಎ.ವಿ. ರಾಜು ಕೂಡ ತ್ರಿಶಾ ಕೃಷ್ಣನ್ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡಿದ್ದಾರೆ. ಮಾನಹಾನಿ ಆಗುವಂತೆ ಮಾತನಾಡಿದ ಎ.ವಿ. ರಾಜು ವಿರುದ್ಧ ಈಗ ತ್ರಿಶಾ ಗುಡುಗಿದ್ದಾರೆ. ಕಾನೂನಿನ ಕ್ರಮ ಕೈಗೊಳ್ಳುವುದಾಗಿ ತ್ರಿಶಾ ಹೇಳಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡುವಾಗ ಎ.ವಿ. ರಾಜು ಅವರು ತ್ರಿಶಾ ಹೆಸರನ್ನು ಎಳೆದು ತಂದಿದ್ದರು. ‘ಲೈಂಗಿಕ ಬಯಕೆಗಾಗಿ ಎ. ವೆಂಕಟಾಚಲಂ ಅವರು ತ್ರಿಶಾರನ್ನು 25 ಲಕ್ಷ ರೂಪಾಯಿಗೆ ಕೇಳಿದ್ದರು. ಅದನ್ನು ಶಾಸಕ ಕರುಣಾಸ್ ವ್ಯವಸ್ಥೆ ಮಾಡಿಸಿದ್ದರು. ಅದಕ್ಕಾಗಿ ಹಲವು ನಟಿಯರು ಇದ್ದಾರೆ’ ಎಂದು ಎ.ವಿ. ರಾಜು ಹೇಳಿರುವ ವಿಡಿಯೋ ವೈರಲ್ ಆಗಿದೆ. ಅದನ್ನು ಅನೇಕರು ಖಂಡಿಸಿದ್ದಾರೆ.
ಎ.ವಿ. ರಾಜು ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ತ್ರಿಶಾ ತಿರುಗೇಟು ನೀಡಿದ್ದಾರೆ. ‘ಪ್ರಚಾರ ಪಡೆಯಲು ಕೀಳು ವ್ಯಕ್ತಿಗಳು ಎಂಥ ಕೆಳಮಟ್ಟಕ್ಕೆ ಬೇಕಾದರು ಇಳಿಯುವುದನ್ನು ಪದೇಪದೇ ನೋಡಲು ಅಸಹ್ಯ ಎನಿಸುತ್ತೆ. ಖಂಡಿತವಾಗಿಯೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನನ್ನ ಲೀಗಲ್ ಡಿಪಾರ್ಟ್ಮೆಂಟ್ನವರು ಎಲ್ಲವನ್ನೂ ನೋಡಿಕೊಳ್ಳಲಿದ್ದಾರೆ’ ಎಂದು ತ್ರಿಶಾ ಟ್ವೀಟ್ ಮಾಡಿದ್ದಾರೆ. ಎಲ್ಲಿಯೂ ಅವರು ಎ.ವಿ. ರಾಜು ಹೆಸರು ಪ್ರಸ್ತಾಪ ಮಾಡಿದ್ದರು.
ಇತ್ತೀಚೆಗೆ ಕೀಳಾಗಿ ಮಾತನಾಡುವವರ ಸಂಖ್ಯೆ ಜಾಸ್ತಿ ಆಗಿದೆ. ಅಂಥವರ ವಿರುದ್ಧ ತ್ರಿಶಾ ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಇನ್ನು ತ್ರಿಶಾ ಸುದ್ದಿ ವೈರಲ್ ಆಗುತ್ತಲೇ ವ್ಯಾಪಕ ಖಂಡನೆ ವ್ಯಕ್ತವಾಯಿತು . ಈ ಹಿನ್ನಲೆ ರಾಜಕಾರಣಿ ಎವಿ ರಾಜು ಅವರ ಭಾವನೆಗಳನ್ನ ನೋಯಿಸಿದ್ದರೆ ಕ್ಷಮಿಸಿ ಎಂದು ಟ್ವೀಟ್ ಮೂಲಕ ಕ್ಷಮೆ ಯಾಚಿಸಿದ್ದಾರೆ.