ಹಾಸನ: ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬಾ ದೇಗುಲಕ್ಕೆ ಭಕ್ತರ ಸಾಗರವೇ ಹರಿದುಬರುತ್ತಿದ್ದು,ಕಳೆದ 12 ದಿನಗಳಲ್ಲಿ 23 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ..
ಅಕ್ಟೋಬರ್ 10 ರಿಂದ ಆರಂಭವಾದ ಸಾರ್ವಜನಿಕ ದರ್ಶನವು ಅಕ್ಟೋಬರ್ 22 ರಂದು ನಾಳೆಯೇ ಕೊನೆಗೊಳ್ಳಲಿದೆ. ಬುಧವಾರ ಸಂಜೆ 7 ಗಂಟೆಗೆ ಸಾರ್ವಜನಿಕರಿಗೆ ದೇಗುಲದ ಪ್ರವೇಶವನ್ನು ಬಂದ್ ಮಾಡಲಾಗುವುದು. ಗುರುವಾರ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿಯೊಂದಿಗೆ ದೇಗುಲದ ಬಾಗಿಲು ಮುಚ್ಚಲಾಗುತ್ತದೆ. ಈ ವರ್ಷ ದೀಪಾವಳಿಯ ಸಂದರ್ಭದಲ್ಲಿ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಈ ಬಾರಿಯ ದರ್ಶನದ ವ್ಯವಸ್ಥೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಚಿವ ಕೃಷ್ಣಭೈರೇಗೌಡ ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಭಕ್ತರಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲಾಗಿದೆ. ದರ್ಶನದ ಸರತಿ ಸಾಲುಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸಲಾಗಿದ್ದು, ಭಕ್ತರಿಗೆ ಕಾಯುವ ಸಮಯವನ್ನು ಕಡಿಮೆ ಮಾಡಲಾಗಿದೆ. ಇದರ ಜೊತೆಗೆ, ಶುದ್ಧ ಕುಡಿಯುವ ನೀರು, ಆಸನ ವ್ಯವಸ್ಥೆ, ಮತ್ತು ಸುರಕ್ಷತೆಯ ವ್ಯವಸ್ಥೆಗಳನ್ನು ಸಹ ಒದಗಿಸಲಾಗಿದೆ.
ಹಾಸನಾಂಬೆ ದೇಗುಲದ ಹುಂಡಿಯ ಎಣಿಕೆಯ ಬಗ್ಗೆಯೂ ಕೌತುಕವಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಹುಂಡಿಯ ಕಾಣಿಕೆಯು ಗಮನ ಸೆಳೆಯುತ್ತಿದೆ. ಹುಂಡಿಯ ಒಟ್ಟು ಮೊತ್ತವು ದೇಗುಲದ ಆಡಳಿತ ಮಂಡಳಿಯಿಂದ ಶೀಘ್ರದಲ್ಲಿ ಪ್ರಕಟವಾಗಲಿದೆ.


