ವೈಕುಂಠ ಏಕಾದಶಿಯ ಪವಿತ್ರ ದಿನದಂದು ತಿರುಮಲ ತಿರುಪತಿಯ ಶ್ರೀವೆಂಕಟೇಶ್ವರಸ್ವಾಮಿಯ ಸನ್ನಿಧಾನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಉದ್ಯಮಿ ಹಾಗೂ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಅವರು ತಿಮ್ಮಪ್ಪನ ದರ್ಶನ ಪಡೆದ್ರು..

ದರ್ಶನಕ್ಕೂ ಮುನ್ನ ತಿರುಮಲ ತಿರುಪತಿಯ ಪದ್ಮಾವತಿ ಅತಿಥಿ ಗೃಹದಲ್ಲಿ ತಂಗಿದ್ದ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಟಿಟಿಡಿಯ ನಿರ್ದೇಶಕರಾದ ಯಲಹಂಕ ವಿಶ್ವನಾಥ್ ಹಾಗೂ ದೇಶಪಾಂಡೆ ಉಪಸ್ಥಿತರಿದ್ರು. ಈ ವೇಳೆ, ತಿರುಪತಿಯಲ್ಲಿ ಹಾಗೂ ಕರ್ನಾಟಕ ಭವನದಲ್ಲಿ ಕರ್ನಾಟಕದ ಭಕ್ತರಿಗೆ ಎದುರಾಗುತ್ತಿರುವ ಸಮಸ್ಯೆಗಳು, ಸಿಗುವ ಸವಲತ್ತುಗಳ ಬಗ್ಗೆ ಸೀಕಲ್ ರಾಮಚಂದ್ರಗೌಡ ಅವರು ಚರ್ಚಿಸಿದ್ರು.

ಇತ್ತೀಚೆಗೆ ತಿರುಪತಿಗೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ಕರ್ನಾಟಕ ಭವನದಲ್ಲಿ ಮೂಲ ಸೌಕರ್ಯಗಳಿಲ್ಲ. ಅಭಿವೃದ್ದಿ ಕಾಮಗಾರಿ ಬಹಳ ನಿಧಾನಗತಿಯಲ್ಲಿ ನಡೆಯುತ್ತಿದ್ದು ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಇನ್ನಷ್ಟು ಹೆಚ್ಚು ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಮನವಿ ಮಾಡಿದರು.

ಜತೆಗೆ ಇಲ್ಲಿಗೆ ಬರುವ ಕನ್ನಡಿಗರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಮಾಹಿತಿ ಕೊರತೆ ಇದೆ. ಈ ಸಮಸ್ಯೆ ಬಗ್ಗೆ ಕರ್ನಾಟಕ ಸರಕಾರವು ಟಿಟಿಡಿ ಟ್ರಸ್ಟ್‌ನ ಮುಖ್ಯಸ್ಥರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿ ಕನ್ನಡ ನಾಡಿನ ಭಕ್ತರಿಗೆ ಸುಗಮವಾಗಿ ತಿಮ್ಮಪ್ಪನ ದರ್ಶನ ಆಗುವಂತೆ ಅನುಕೂಲ ಕಲ್ಪಿಸಬೇಕೆಂದು ಟಿಟಿಡಿ ಸಮಿತಿಯ ನಿರ್ದೇಶಕರಾದ ವಿಶ್ವನಾಥ್ ಅವರೊಂದಿಗೆ ಚರ್ಚಿಸಿದರು. ನಂತರ ರಾಜ್ಯಪಾಲರೊಂದಿಗೆ ತೆರಳಿ, ತಿಮ್ಮಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದ್ರು