ಕರ್ನಾಟಕದ ಮುಜರಾಯಿ ದೇಗುಲಗಳಲ್ಲಿ ಭಕ್ತರಿಗೆ ನೀಡುವ ಪ್ರಸಾದ ಸುರಕ್ಷಿತವಾಗಿದೆ. ಆಹಾರವೂ ಗುಣಮಟ್ಟದಿಂದ ಕೂಡಿದೆ. ಆದರೂ ಈ ಬಗ್ಗೆ ಅನುಮಾನಗಳು ಉಳಿಯಬಾರದು. ಅದಕ್ಕಾಗಿ ಎಲ್ಲ ದೇಗುಲಗಳ ಪ್ರಸಾದ ಪರೀಕ್ಷೆಗೆ ಒಳಪಡಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 21: ತಿರುಪತಿ ತಿರುಮಲ ದೇಗುಲದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ, ರಾಜ್ಯದ ಮುಜರಾಯಿ ವ್ಯಾಪ್ತಿಯ ಎಲ್ಲ ದೇಗುಲಗಳಲ್ಲಿ ಪ್ರಸಾದ ತಯಾರಿಗೆ ನಂದಿನಿ ತುಪ್ಪವನ್ನೇ ಬಳಸುವಂತೆ ಶುಕ್ರವಶರ ಸುತ್ತೋಲೆ ಹೊರಡಿಸಿತ್ತು. ಇದೀಗ ಮುಜರಾಯಿ ವ್ಯಾಪ್ತಿಯ ಎಲ್ಲ ದೇಗುಲಗಳ ಪ್ರಸಾದವನ್ನು ಪ್ರಯೋಗಾಲಯದಲ್ಲಿ ಪರಿಶೀಲನೆಗೆ ಒಳಪಡಿಸುವಂತೆ ಆದೇಶಿಸಿದೆ.

ಮುಜರಾಯಿ ಇಲಾಖೆ ಅಡಿಯಲ್ಲಿ ರಾಜ್ಯದಲ್ಲಿ 34,000 ಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ, 205 ದೇಗುಲಗಳ ವಾರ್ಷಿಕ ಆದಾಯ 25 ಲಕ್ಷ ರೂ.ಗಿಂತ ಹೆಚ್ಚಿದ್ದು, ವರ್ಗ-ಎ ಎಂದು ವರ್ಗೀಕರಿಸಲ್ಪಟ್ಟಿವೆ. 193 ದೇಗುಲಗಳನ್ನು 5 ಲಕ್ಷದಿಂದ ರೂ. 25 ಆದಾಯದೊಂದಿಗೆ ವರ್ಗ-ಬಿ ಎಂದು ಗುರುತಿಸಲಾಗಿದೆ. ಉಳಿದವುಗಳನ್ನು 5 ಲಕ್ಷ ರೂ. ಆದಾಯದೊಂದಿಗೆ ವರ್ಗ-ಸಿ ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ದೇವಾಲಯಗಳು ಭಕ್ತರಿಗೆ ಪ್ರಸಾದವನ್ನು ನೀಡುತ್ತವೆ.

ಪ್ರಸಾದಗಳ ಪರೀಕ್ಷೆ ಯಾಕೆ? ಸಚಿವರು ಹೇಳಿದ್ದೇನು?

ರಾಜ್ಯದ ದೇವಾಲಯಗಳು ಭಕ್ತರಿಗೆ ಸುರಕ್ಷಿತ ಮತ್ತು ಆರೋಗ್ಯಕರ ಪ್ರಸಾದ ಮತ್ತು ಆಹಾರವನ್ನು ನೀಡುತ್ತವೆ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಮುಜರಾಯಿ ವ್ಯಾಪ್ತಿಯ ದೇಗುಲಗಳ ಪ್ರಸಾದದ ವಿಚಾರದಲ್ಲಿ ಜನರಿಗೆ ಯಾವುದೇ ಅನುಮಾನ ಇರಬಾರದು. ಹೀಗಾಗಿ ಪ್ರಸಾದಗಳ ಪರೀಕ್ಷೆ ನಡೆಸುವಂತೆ ಸುತ್ತೋಲೆ ಹೊರಡಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ದೇವಸ್ಥಾನಗಳಲ್ಲಿ ನಂದಿನಿ ತುಪ್ಪವೇ ಬಳಸಿ: ಸುತ್ತೋಲೆ
ದೇವಾಲಯಗಳಲ್ಲಿ ದೀಪಗಳನ್ನು ಬೆಳಗಲು ಮತ್ತು ಪ್ರಸಾದ ತಯಾರಿಸಲು ನಂದಿನಿ ತುಪ್ಪವನ್ನು ಮಾತ್ರ ಬಳಸುವಂತೆ ನಿರ್ದೇಶನ ನೀಡಲಾಗಿದೆ. ಇದಕ್ಕೂ ಮುನ್ನ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಕಾಂಗ್ರೆಸ್ ಸರ್ಕಾರ ದೇವಸ್ಥಾನಗಳಲ್ಲಿ ನೀಡುವ ಪ್ರಸಾದವನ್ನು ಪರೀಕ್ಷಿಸಬೇಕು ಎಂದು ಆಗ್ರಹಿಸಿದ್ದರು.

Leave a Reply

Your email address will not be published. Required fields are marked *

Verified by MonsterInsights