ಬೆಂಗಳೂರು: ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿಕೆ ನೀಡಿದ್ದು, ಇದೀಗ ಅದನ್ನು ಸಮರ್ಥಿಸಿಕೊಂಡಿದ್ದಾರೆ.
ತಮ್ಮ ಹೇಳಿಕೆ ಬಗ್ಗೆ ಸಿ.ಟಿ ರವಿ, ಆರ್ ಅಶೋಕ್ ಸೇರಿದಂತೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದು, ಈ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಕೆಆರ್ಎಸ್ ಅಡಿಗಲ್ಲಿನ ಪೋಟೋ ಹಾಕಿರುವ ಅವರು ಹಜರತ್ ಟಿಪ್ಪು ಸುಲ್ತಾನ್ ಅವರಿಗೆ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ಕಟ್ಟುವ ಆಲೋಚನೆ ಇತ್ತು ಮತ್ತು ಅದಕ್ಕಾಗಿ ಆತ ಕೆಲಸ ಮಾಡಿದ್ದ ಎಂಬುದಕ್ಕೆ ಈಗಲೂ ನಮ್ಮ KRS ನಲ್ಲಿ ಸಾಕ್ಷಿಯಾಗಿರುವ ಅಡಿಗಲ್ಲು. ದಯಮಾಡಿ ನಮ್ಮ ಬಂಧುಗಳು ಅದನ್ನು ಗಮನಿಸಬೇಕು ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಸಿ.ಟಿ ರವಿ ವಿರುದ್ಧ ಹೆಚ್. ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಸಿ.ಟಿ ರವಿ ಅವರೇ ಈ ವಿವರಣೆಯು ಈಗಲೂ KRS ನಲ್ಲೇ ಇದೆ. ಸುಮ್ಮನೇ ಧರ್ಮದ ಕಾರಣಕ್ಕಾಗಿ ರಾಜಕೀಯ ಮಾಡುವ ಬದಲು ಕನ್ನಡವನ್ನು ಓದುವುದನ್ನು ಕಲಿಯಿರಿ ಮತ್ತು ಪದಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಿರಿ ಎಂದು ತಿರುಗೇಟು ನೀಡಿದ್ದಾರೆ.