ಬೆಂಗಳೂರು : ಅವಳಿ ಮಕ್ಕಳು ಚಿಕ್ಕವರಿದ್ದಾಗ ಬೇರ್ಪಟ್ಟು ದೊಡ್ಡವರಾದ ಮೇಲೆ ಒಂದಾಗುವ ಕತೆಗಳು ಭಾರತೀಯ ಸಿನಿಮಾಗಳಲ್ಲಿ ಬೇಕಾದಷ್ಟು ಬಂದು ಹೋಗಿವೆ. ಆದರೆ, ನಿಜ ಜೀವನದಲ್ಲೂ ಹಾಗೆ ಆಗಲು ಸಾಧ್ಯ ಎಂದರೆ ಉತ್ತರ ಖಂಡಿತವಾಗಿಯೂ ಇಲ್ಲ ಎಂದಾಗಿರುತ್ತದೆ. ಆದರೆ, ಇಂಥ ವಿಚಿತ್ರ ನಡೆದಿದೆ. ಆಮಿ ಖ್ವಿಟಿಯಾ ಮತ್ತು ಅನೋ ಸರ್ತಾನಿಯಾ, ಹುಟ್ಟಿನಿಂದಲೇ ಬೇರ್ಪಟ್ಟ ಅವಳಿಗಳು. ಆದರೆ ಅವರಿಬ್ಬರೂ ಜಾರ್ಜಿಯಾದಲ್ಲಿ ತಮಗೆ ಗೊತ್ತಿಲ್ಲದಂತೆಯೇ ಕೇವಲ ಮೈಲುಗಳಷ್ಟು ದೂರದಲ್ಲಿ ವಾಸಿಸುತ್ತಿದ್ದಾರೆ! ಅವರೀಗ ಒಂದಾಗಿದ್ದಾರೆ. ಅವರನ್ನು ಟಿಕ್ ಟಾಕ್ ಟಿಕ್‌ಟಾಕ್ ವೀಡಿಯೊ ಮತ್ತು ಪ್ರತಿಭಾ ಪ್ರದರ್ಶನವು ಒಂದು ಮಾಡಿದೆ.
ಅವಳಿಯಾಗಿ ಬೇರ್ಪಟ್ಟು ಈಗ ಒಂದೇ ಊರಿನಲ್ಲಿ ವಾಸವಾಗಿದ್ದರೂ ಅರಿವಿಲ್ಲದ ಈ ಅವಳಿಗಳ ಕುರಿತು ಬಿಬಿಸಿ ವರದಿ ಮಾಡಿದೆ. ಈ ಮೂಲಕ ಜಾರ್ಜಿಯಾದಲ್ಲಿ ಶಿಶುಗಳ ಮಾರಾಟದ ಮೇಲೂ ಬೆಳಕು ಚೆಲ್ಲಲಾಗಿದೆ. ದಶಕಗಳ ಹಿಂದೆ ಆಸ್ಪತ್ರೆಗಳಿಂದ ಮಕ್ಕಳನ್ನು ಕದ್ದು ಮಾರಾಟ ಮಾಡುತ್ತಿದ್ದ ಪ್ರಕರಣವೂ ಯಾವುದೇ ಅಂತ್ಯವನ್ನು ಕಾಣದೇ ಇನ್ನೂ ಹಾಗೆಯೇ ಉಳಿದಿದೆ. ಆಮಿ ಮತ್ತು ಅನೋ ಅವರ ಅನ್ವೇಷಣೆಯ ಪ್ರಯಾಣವು ಕೇವಲ 12 ವರ್ಷದವರಾಗಿದ್ದಾಗ ಪ್ರಾರಂಭವಾಯಿತು. ತನ್ನ ಅಚ್ಚುಮೆಚ್ಚಿನ ಟಿವಿ ಶೋ ‘ಜಾರ್ಜಿಯಾಸ್ ಗಾಟ್ ಟ್ಯಾಲೆಂಟ್’ ನಲ್ಲಿ ಮಗ್ನಳಾದ ಆಮಿ, ತನ್ನೊಂದಿಗೆ ವಿಲಕ್ಷಣವಾದ ಹೋಲಿಕೆಯನ್ನು ಹೊಂದಿರುವ ಹುಡುಗಿಯೊಬ್ಬಳನ್ನು ನೃತ್ಯ ಮಾಡುವುದನ್ನು ನೋಡಿದಳು. ಆದರೆ, ಆ ನರ್ತಿಸುವ ಹುಡುಗಿ ಕಳೆದುಹೋದ ಸಹೋದರಿ ಎಂದು ಆಕೆಗೆ ತಿಳಿದಿರಲಿಲ್ಲ.
ಮತ್ತೊಂದೆಡೆ, ಅನೋ ಅವರು ನೀಲಿ ಕೂದಲಿನ ಮಹಿಳೆಯನ್ನು ಒಳಗೊಂಡಿರುವ ಟಿಕ್‌ಟಾಕ್ ವೀಡಿಯೊವನ್ನು ನೋಡಿದ್ದಾರೆ. ವಿಡಿಯೋದಲ್ಲಿರುವ ಹುಡುಗಿ ತನ್ನಂತೆಯೇ ಇದ್ದದ್ದನ್ನು ಕಂಡು ಬೆರಗಾಗಿದ್ದಾಳೆ. ಆ ಮೇಲೆ ಆಕೆ ತನ್ನ ಅವಿ ಆಮಿ ಎಂದು ಗೊತ್ತಾಗಿದೆ. 2002ರಲ್ಲಿ ಈ ಅವಳಿಗಳು ಜನಿಸಿದ್ದರು. ಹೆರಿಗೆ ಸಮಯದಲ್ಲಿನ ತೊಂದರೆಯಿಂದಾಗಿ ಆಕೆ ಕೋಮಾಕ್ಕೆ ಜಾರಿದ್ದರು. ಈಕೆಯ ಗಂಡ ಗೋಚಾ ಗಖಾರಿಯಾ ಈ ಎರಡು ಅವಳಿ ಮಕ್ಕಳನ್ನು ಪ್ರತ್ಯೇಕ ಕುಟುಂಗಳಿಗೆ ಮಾರಾಟ ಮಾಡಿದ್ದ!
ಅನೋ ಟಿಬಿಲಿಸಿಯಲ್ಲಿ ಬೆಳೆದರೆ, ಆಮಿ ಜುಗ್ಡಿಡಿಯಲ್ಲಿ ಬೆಳೆದರು. ಈ ಇಬ್ಬರಿಗೂ ತಾವು ಅವಳಿ ಎಂಬುದು ಕಿಂಚಿತ್ ಗೊತ್ತಿರಲಿಲ್ಲ. 11 ನೇ ವಯಸ್ಸಿನಲ್ಲಿ ಅದೇ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೂ, ನೋಡುಗರು ಎದ್ದುಕಾಣುವ ಹೋಲಿಕೆಯನ್ನು ಗಮನಿಸಿದರೂ, ಸತ್ಯವು ಅಸ್ಪಷ್ಟವಾಗಿ ಉಳಿದಿತ್ತು. ಆದರೆ, ಟಿಕ್‌ಟಾಕ್ ವಿಡಿಯೋದ ಅದೃಷ್ಟದಿಂದಾಗಿ ಅವರಿಬ್ಬರು ಮತ್ತೆ ಒಂದಾಗಲು ಸಾಧ್ಯವಾಯಿತು. ತಮಗೆ ಏಕೆ ಹೀಗಾಯಿತು ಎಂಬ ಪ್ರಶ್ನೆಗೆ ಉತ್ತರ ಹುಡುಕುವಾಗ ಬಹುದೊಡ್ಡ ಸತ್ಯವೇ ಅವರಿಗೆ ಗೊತ್ತಾಗಿದೆ. 2005ರಲ್ಲಿ ಆರ್ಜಿಯನ್ ಆಸ್ಪತ್ರೆಗಳಿಂದ ಮಾರಾಟವಾದ ಸಾವಿರಾರು ಶಿಶುಗಳು ಪೈಕಿ ತಾವು ಇಬ್ಬರೂ ಎಂಬುದು ಗೊತ್ತಾಗಿದೆ.