ಮುಂಬೈ: ಅಂತೂ ಇಂತೂ ಮಹಾರಾಷ್ಟ್ರ ಸರ್ಕಾರ ರಚನೆಯಾಗಿದೆ. ಈ ಮಹಾಯುತಿ ಸರ್ಕಾರದಲ್ಲಿ ಖಾತೆಹಂಚಿಕೆ ತಲೆಬಿಸಿ ಶುರುವಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರು ಪ್ರಮಾಣವಚನ ಸ್ವೀಕರಿಸಿ 24 ಗಂಟೆ ಕಳೆದರೂ ಉಳಿದ ಖಾತೆಗಳ ಹಂಚಿಕೆಯಾಗಿಲ್ಲ.ಹೊಸ ಸರ್ಕಾರದಲ್ಲಿ ಅನೇಕ ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಬಯಸುತ್ತಾರೆ, ಆದರೆ ಸಚಿವಾಲಯಗಳು ಸಂಖ್ಯೆಯಲ್ಲಿ ಸೀಮಿತವಾಗಿವೆ. ಮೈತ್ರಿಕೂಟಕ್ಕೆ 232 ಶಾಸಕರ ಬೆಂಬಲವಿದೆ ಆದರೆ 43 ಸಚಿವರನ್ನು ಮಾತ್ರ ಸಂಪುಟಕ್ಕೆ ಸೇರ್ಪಡೆ ಮಾಡಬಹುದಾಗಿದೆ.
ಯಾರಿಗೆಲ್ಲ ಖಾತೆ ಹಂಚಿಕೆಯಾಗಬೇಕು ಎಂಬುದು ಒಂದು ದೊಡ್ಡ ಪ್ರಶ್ನೆಯಾಗಿದೆ.ಪಕ್ಷದ ನಾಯಕತ್ವವು ಎಲ್ಲರಿಗೂ ಸ್ವೀಕಾರಾರ್ಹವಾದ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂಬ ಭರವಸೆ ನಮ್ಮಗಿದೆ ಎಂದು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಶಿರ್ಸಾತ್ ಹೇಳಿದ್ದಾರೆ.
132 ಸ್ಥಾನಗಳನ್ನು ಹೊಂದಿರುವ ಏಕೈಕ ದೊಡ್ಡ ಪಕ್ಷವಾಗಿ, ಬಿಜೆಪಿಯು ತನ್ನ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿಗೆ ಶೇಕಡಾ 40 ರಷ್ಟು ಖಾತೆ ಬಿಟ್ಟುಕೊಡಲು ಸಿದ್ಧವಾಗಿರುವಾಗ ಶೇಕಡಾ 60ರಷ್ಟು ಬಿಜೆಪಿಯಲ್ಲಿಯೇ ಉಳಿಯುತ್ತವೆ.
ಬಿಜೆಪಿಯ ಹಿರಿಯ ನಾಯಕರು ತಮಗೆ ಭಾರೀ ಜನಾದೇಶ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗಿದೆ, ಆದರೆ ಇಂತಹ ಪರಿಸ್ಥಿತಿಯಲ್ಲಿ ಎಲ್ಲರನ್ನೂ ಸಮಾಧಾನಪಡಿಸುವುದು ಕಷ್ಟ ಎಂದರು. ಹಿಂದಿನ ಸರಕಾರದಲ್ಲಿ ಕೆಲವರನ್ನು ಕಾಯುವಂತೆ ಹೇಳಲಾಗಿದ್ದು ಅವರೀಗ ಮಂತ್ರಿಗಿರಿ ಕೇಳುತ್ತಿದ್ದಾರೆ. ನಾವು ಸಚಿವಾಲಯವನ್ನು ರಚಿಸುವಾಗ ಪ್ರಾದೇಶಿಕ, ಜಾತಿ ಮತ್ತು ಹಿರಿತನದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಮಹಾಯುತಿ ನಾಯಕರಿಗೆ ಇದು ಕಠಿಣ ಕೆಲಸವಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ಪರಿಸ್ಥಿತಿ ಬಗ್ಗೆ ಹೇಳುತ್ತಾರೆ.