ಚಾಮರಾಜನಗರ:ಜಿಲ್ಲೆಯ ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ಕಳೇಬರ ಪತ್ತೆಯಾಗಿದೆ..
ಮಾದಪ್ಪನ ಬೆಟ್ಟದ ತಪ್ಪಲಲ್ಲಿ ಮತ್ತೆ ಬೇಟೆಗಾರರು ಸಕ್ರಿಯರಾಗಿರುವ ಅನುಮಾನ ಸೃಷ್ಟಿಯಾಗಿದೆ. ಹುಲಿಯ ತಲೆ, ಭುಜ, ಮುಂಗಾಲುಗಳು ಮಾತ್ರ ಲಭ್ಯವಾಗಿದೆ. ಉಳಿದ ಭಾಗಗಳು ನಾಪತ್ತೆಯಾಗಿದೆ. ಈ ಘಟನೆ ಮಲೆಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಪಿಸಿಸಿಎಫ್ ತಂಡದ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ. ಪಿಸಿಸಿಎಫ್ ತಂಡದ ಸ್ಮಿತಾ ಬಿಜ್ಜೂರು ಅಧಿಕಾರಿಗಳ ನೇತೃತ್ವದಲ್ಲಿ 8 ದಿನಗಳಲ್ಲಿ ವರದಿ ಸಲ್ಲಿಸಿ, ಹುಲಿಯ ಹಂತಕರನ್ನು ಪತ್ತೆಮಾಡಲು ಮುಂದಾಗಬೇಕು ಎಂದು ಸಚಿವ ಖಂಡ್ರೆ ಸೂಚಿಸಿದ್ದಾರೆ.
ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಕಳ್ಳಬೇಟೆ ಘಟನೆ ಬಗ್ಗೆ ಸ್ಥಳೀಯರು ಮತ್ತು ಪರಿಸರ ಸಂರಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸರ ಇಲಾಖೆ ಮತ್ತು ವನ್ಯಜೀವಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


