
ನವದೆಹಲಿ : ವರದಕ್ಷಿಣೆ ಕಿರುಕುಳ ತಡೆಗಟ್ಟಲು ಸರ್ಕಾರವು ಒಂದು ಅತ್ಯಂತ ಕಠಿಣ ಹಾಗೂ ವಿನೂತನ ಕ್ರಮಕ್ಕೆ ಮುಂದಾಗಿದ್ದು, ಕಿರುಕುಳ ನೀಡುವ ಕುಟುಂಬಗಳ ಅಡುಗೆ ಮನೆಯ ಇಂಧನ ಪೂರೈಕೆಯನ್ನೇ ಸ್ಥಗಿತಗೊಳಿಸಲು ನಿರ್ಧರಿಸಿದೆ. ಜೈಲು ಶಿಕ್ಷೆ ಮತ್ತು ದಂಡದಂತಹ ಸಾಮಾನ್ಯ ಕಾನೂನು ಕ್ರಮಗಳು ಕಿರುಕುಳವನ್ನು ಸಂಪೂರ್ಣವಾಗಿ ಹತ್ತಿಕ್ಕಲು ವಿಫಲವಾಗಿರುವ ಹಿನ್ನೆಲೆಯಲ್ಲಿ, ದೈನಂದಿನ ಅತ್ಯಗತ್ಯ ಸೇವೆಯಾದ ಗ್ಯಾಸ್ ಸಂಪರ್ಕವನ್ನು ಕಟ್ ಮಾಡುವ ಮೂಲಕ ತಪ್ಪಿತಸ್ಥರಿಗೆ ಬಿಸಿ ಮುಟ್ಟಿಸಲು ಅಧಿಕಾರಿಗಳು ಈ ‘ಸರ್ಜಿಕಲ್ ಸ್ಟ್ರೈಕ್’ ಮಾದರಿಯ ನಿರ್ಧಾರ ಕೈಗೊಂಡಿದ್ದಾರೆ.
ಈ ನೂತನ ನಿಯಮದ ಪ್ರಕಾರ, ಸೊಸೆಗೆ ಮಾನಸಿಕ ಅಥವಾ ದೈಹಿಕ ಹಿಂಸೆ ನೀಡುತ್ತಿರುವ ಬಗ್ಗೆ ದೂರು ದಾಖಲಾಗಿ, ಅದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟರೆ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆ. ಆ ಕುಟುಂಬಕ್ಕೆ ಪೂರೈಕೆಯಾಗುವ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಅಥವಾ ಎಲ್ಪಿಜಿ (LPG) ಸಿಲಿಂಡರ್ ವಿತರಣೆಯನ್ನು ಸ್ಥಗಿತಗೊಳಿಸುವಂತೆ ಗ್ಯಾಸ್ ಕಂಪನಿಗಳಿಗೆ ಪೊಲೀಸ್ ಇಲಾಖೆ ಸೂಚನೆ ನೀಡಲಿದೆ. ಇದು ಕಿರುಕುಳ ನೀಡುವ ಪತಿ ಮತ್ತು ಅತ್ತೆ-ಮಾವಂದಿರಿಗೆ ನೇರ ಎಚ್ಚರಿಕೆಯಾಗಿದ್ದು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹದ್ದುಬಸ್ತಿನಲ್ಲಿಡುವ ಉದ್ದೇಶವನ್ನು ಹೊಂದಿದೆ.
ಈ ಯೋಜನೆಯನ್ನು ಜಾರಿಗೆ ತರಲು ಪೊಲೀಸ್ ಇಲಾಖೆ, ಮಹಿಳಾ ಆಯೋಗ ಮತ್ತು ಗ್ಯಾಸ್ ಸರಬರಾಜು ಸಂಸ್ಥೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಿವೆ. ದೂರು ಬಂದ ತಕ್ಷಣ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ನಿರ್ಧಾರದ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದರೂ, ಮಹಿಳಾ ಸಂಘಟನೆಗಳು ಈ ಕಠಿಣ ಕ್ರಮವನ್ನು ಸ್ವಾಗತಿಸಿವೆ.




