ಕಲಬುರಗಿ: ಮತಗಳವು ವಿಚಾರದಲ್ಲಿ ನಾವು ಇಷ್ಟು ದಿನ ಹೇಳುತ್ತಿದ್ದ ವಿಷಯ ಎಸ್‌ಐಟಿ ತನಿಖೆಯಿಂದ ದೃಢಪಟ್ಟಿದೆ. ಹೀಗಾಗಿ ಹೊಣೆಗಾರರನ್ನು ಜೈಲಿಗೆ ತಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಮತದಾರರ ಪಟ್ಟಿಯಿಂದ ಮತದಾರರ ಹೆಸರು ಅಳಿಸಿಹಾಕಲು ಪ್ರತಿಯೊಂದಕ್ಕೆ 80 ರೂ ಪಾವತಿಸಲಾಗಿದೆ ಎನ್ನುವ ಅಂಶ ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ.
2023 ರ ಚುನಾವಣೆಗೆ ಮುನ್ನ ಕಲಬುರಗಿ ಆಳಂದ ಕ್ಷೇತ್ರದಲ್ಲಿ ಹಣ ನೀಡುವ ಮೂಲಕ ಸುಮಾರು 6,000 ಕ್ಕೂ ಅಧಿಕ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದಿದ್ದಾರೆ. ಕಲಬುರಗಿಯ ಪೂರ್ಣ ಪ್ರಮಾಣದ ದತ್ತಾಂಶ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಿರ್ವಾಹಕರು ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕುವ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಹಾಳುಗೆಡವುತ್ತಿದ್ದರು.
ಎಲ್ಲಾ ತನಿಖೆಗಳು ಈಗ ಬಿಜೆಪಿ ನಾಯಕರು ಮತ್ತು ಅವರ ಸಹಚರರ ಅಕ್ರಮವನ್ನು ತೋರಿಸುತ್ತವೆ. ಬಿಜೆಪಿಯ ವೋಟ್ ಚೋರಿಯ ಪ್ರತಿಯೊಂದು ತಂತ್ರ ಮತ್ತು ಕಾರ್ಯವೈಖರಿಯನ್ನು ಬಹಿರಂಗಪಡಿಸುತ್ತಿವೆ. ಈ ವಿಷಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಿ ಜೈಲಿಗೆ ಹಾಕಲಾಗುವುದು ಎಂದು ಪ್ರಿಯಾಂಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


