ಹೈದ್ರಾಬಾದ್: ತೆಲಗು ಚಿತ್ರರಂಗದ ಹಿರಿಯ ನಟ ಕೋಟ ಶ್ರೀನಿವಾಸ್ ರಾವ್ ಭಾನುವಾರ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಹೈದ್ರಾಬಾದ್ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೋಟ ಶ್ರೀನಿವಾಸ್ ರಾವ್ ಜುಲೈ 10, 1942 ರಂದು ಕೃಷ್ಣ ಜಿಲ್ಲೆಯ ಕಂಕಿಪಡುವಿನಲ್ಲಿ ಜನಿಸಿದರು. 4 ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಹಲವು ವಿಶಿಷ್ಟ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರಂಗಭೂಮಿಯ ಹಿನ್ನಲೆಯಿಂದ ಬಂದ ಶ್ರೀನಿವಾಸ್ ರಾವ್, ಚಿತ್ರಪ್ರೇಮಿಗಳಿಗೆ ಮನೋರಂಜನೆ ನೀಡಿದ್ದಾರೆ. 1999ರಿಂದ 2004ರವರೆಗೆ ವಿಜಯವಾಡ ಪೂರ್ವ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೋಟ ಶ್ರೀನಿವಾಸ ರಾವ್ ಅವರ ಪತ್ನಿ ರುಕ್ಮಿಣಿ. ಕೋಟ ಶ್ರೀನಿವಾಸ್ ರಾವ್ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಾಗಿದ್ದ. ಮಗ ಕೋಟ ವೆಂಕಟ ಆಂಜನೇಯ ಪ್ರಸಾದ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮಗನ ಅಕಾಲಿಕ ಮರಣದಿಂದ ಅವರು ತೀವ್ರ ಆಘಾತಕ್ಕೊಳಗಾಗಿದ್ದರು.
ಹಿರಿಯ ನಟನ ಅಗಲಿಕೆ ಟಾಲಿವುಡ್ ಚಿತ್ರರಂಗ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಸಿಎಂ ಚಂದ್ರಬಾಬು ನಾಯ್ಡು ಎಕ್ಸ್ನಲ್ಲಿ ಸಂತಾಪ ಸೂಚಿಸಿದ್ದಾರೆ. ಖ್ಯಾತ ನಟ ಕೋಟಾ ಶ್ರೀನಿವಾಸ ರಾವ್ ಅವರ ನಿಧನ ದುಃಖ ತಂದಿದೆ. ನಾಲ್ಕು ದಶಕಗಳಿಂದ ಸಿನಿಮಾ ರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ಧಾರೆ ಎಂದ್ರು.


