ಬೆಂಗಳೂರು :  ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಜನ ಕೊಟ್ಟ ತೀರ್ಪನ್ನು ಗೌರವಯುತವಾಗಿ ಸ್ವೀಕರಿಸಿದ್ದೇನೆ. ಈಗಾಗಲೇ ಸಿಎಂ ಸ್ಥಾನದಲ್ಲಿ ಒಬ್ಬರು ಕೂತಿದ್ದಾರೆ. ಪಕ್ಷದ ಅದ್ಯಕ್ಷ ಸ್ಥಾನದಲ್ಲಿ ಮತ್ತೊಬ್ಬರು ಕೂತಿದ್ದಾರೆ. ಆ ಸ್ಥಾನಗಳು ಖಾಲಿಯಾಗುವ ಸಂದರ್ಭದಲ್ಲಿ ಪಕ್ಷ ಅದರ ಬಗ್ಗೆ ಚರ್ಚೆ ಮಾಡಲಿದೆ’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ. ಏನೇ ತೀರ್ಮಾನ ಮಾಡಬೇಕಾದರೂ ಪಕ್ಷದ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತೀರ್ಮಾನ ಮಾಡಬೇಕು. ಅಧ್ಯಕ್ಷ ಸ್ಥಾನದಲ್ಲಿ ಶಿವಕುಮಾರ್ ಅವರೇ ಇರಬೇಕು ಎಂದೇನಿಲ್ಲ.

ಅವರು ನಾಲ್ಕೈದು ವರ್ಷಗಳಿಂದ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತಂದಿದ್ದಾರೆ. ಆ ಹುದ್ದೆಗೆ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಡಾ.ಪರಮೇಶ್ವರ್ ಮತ್ತೊಮ್ಮೆ ಆದರೂ ಸಂತೋಷ. ಈ ಸ್ಥಾನ ಅಲಂಕರಿಸಬೇಕೆಂದು ಬೇರೆ ಯಾರಿಗೆ ಆತುರವಿದೆಯೋ ಅವರೇ ಆದರೂ ಸಂತೋಷ. ಯಾರೂ ಆಗಬಾರದು ಎಂಬುದೇನಿಲ್ಲ. ಪಕ್ಷದ ದೃಷ್ಟಿಯಿಂದ ಎಲ್ಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಬೇಕಾದ ಗುರುತರ ಜವಾಬ್ದಾರಿ ಎಲ್ಲ ನಾಯಕರ ಮೇಲಿದೆ. ಸಿದ್ದರಾಮಯ್ಯ ಅವರು ಬೇಕಾದರೂ ಅಧ್ಯಕ್ಷರಾಗಬಹುದು, ನಾನಂತೂ ಆಕಾಂಕ್ಷಿಯಲ್ಲ” ಎಂದು ತಿಳಿಸಿದರು.

ಅಧ್ಯಕ್ಷ ಸ್ಥಾನ ಬದಲಾವಣೆಗೆ ಪಕ್ಷದಲ್ಲಿ ಯಾರೂ ತರಾತುರಿಯಲ್ಲಿಲ್ಲ. ಪಕ್ಷದ ಏಳಿಗೆ, ಒಳಿತು ಬಯಸುವವರು, ಜನರ ಸಂಕಷ್ಟ ಅರಿತಿರುವವರು, ತಮ್ಮ ಮುಂದಿರುವ ಸವಾಲು ತಿಳಿದು ಪಕ್ಷವನ್ನು ಸಂಘಟಿಸುವವರು ಈ ಸ್ಥಾನಕ್ಕೆ ಆಯ್ಕೆಯಾಗಬೇಕು ಎಂದು ಚಿಂತನ ಮಂಥನ ಸಭೆ ನಡೆದರೆ ಒಳ್ಳೆಯದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸುರೇಶ್ ತಿಳಿಸಿದರು.

Leave a Reply

Your email address will not be published. Required fields are marked *

Verified by MonsterInsights