ಬೆಂಗಳೂರು: ರಾಜ್ಯದಲ್ಲಿ ಇದುವರೆಗೂ ಬೇಡಿಕೆಗೆ ಅನುಗುಣವಾಗಿ 6.55 ಲಕ್ಷ ಮೆಟಿಕ್ ಟನ್‌ನಷ್ಟು ಯೂರಿಯಾ, ರಸಗೊಬ್ಬರ ಪೂರೈಕೆ ಮಾಡಿದ್ದೇವೆ. ನಮ್ಮ ಬಳಿ ಇನ್ನೂ 1.94 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ದಾಸ್ತಾನಿದೆ. ಹಾಗಾಗಿ ರೈತರು ಆತಂಕ ಪಡುವುದು ಬೇಡ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯೂರಿಯಾ, ರಸಗೊಬ್ಬರದ ಸಮಸ್ಯೆ ಆಗಿದೆಯಲ್ಲಾ ಎಂಬ ಪ್ರಶ್ನೆಗೆ, ಇಡೀ ದೇಶದಲ್ಲೇ ಗೊಬ್ಬರದ ಸಮಸ್ಯೆ ಇರುವುದು ಸತ್ಯ. ಒಂದೆಡೆ ಇರಾನ್ ಯುದ್ಧದ ಕಾರಣದಿಂದ ಗೊಬ್ಬರ ಆಮದು ಆಗುತ್ತಿಲ್ಲ. ಇನ್ನೊಂದೆಡೆ ಭಾರತಕ್ಕೆ ಚೀನಾ ಯೂರಿಯಾ ಮಾರಾಟವನ್ನು ನಿಲ್ಲಿಸಿದೆ.
ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಬರಬೇಕಾಗಿರುವ ರಸಗೊಬ್ಬರ ಸರಬರಾಜು ಕಡಿಮೆಯಾಗಿದೆ. ಆದ್ರೂ ಸಹ ನಮ್ಮ ಸರ್ಕಾರ ಮತ್ತು ಇಲಾಖೆ ಅಧಿಕಾರಿಗಳ ಪ್ರಯತ್ನದಿಂದ ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿದ್ದ ರಸಗೊಬ್ಬರ ತರಿಸುವಲ್ಲಿ ಯಶಸ್ವಿಯಾಗಿದ್ದೇವೆ. ರೈತರಿಗೆ ಇದುವರೆಗೂ ಅಂದೆ 6.55 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆ ಮಾಡಿದ್ದೇವೆ. ನಮ್ಮಲ್ಲಿ ಇನ್ನೂ 1.94 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ದಾಸ್ತಾನಿದೆ. ಹೀಗಾಗಿ ಯಾರೂ ಭಯಪಡುವ ಅವಶ್ಯತೆ ಇಲ್ಲ ಎಂದ್ರು.
ವಿವಿಧ ಜಿಲ್ಲೆಗಳಲ್ಲಿ ರಸಗೊಬ್ಬದ ಸಮಸ್ಯೆ ಏಕೆ ಆಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕೆಲವು ಜಿಲ್ಲೆಗಳಲ್ಲಿ ರಸಗೊಬ್ಬ ವಿತರಣೆಯಲ್ಲಿ ಸಣ್ಣಪುಟ್ಟ ಸಮಸ್ಯೆ ಆಗಿರಬಹುದು. ರೈತರು ರಸಗೊಬ್ಬರ ಸಿಗುವುದಿಲ್ಲ ಎಂಬ ತಪ್ಪು ಗ್ರಹಿಕೆಯಿಂದ ಮುಂದಿನ ತಿಂಗಳು ಬೇಕಾಗಿರುವ ಗೊಬ್ಬರವನ್ನು ಈಗಲೇ ಸಂಗ್ರಹಿಸಲು ಮುಗಿ ಬಿದ್ದಿದ್ದಾರೆ. ರೈತರಿಗೆ ಗೋಡೋನ್‌ನಲ್ಲಿ ಗೊಬ್ಬರ ದಾಸ್ತಾನಿಲ್ಲ ಎನ್ನುವ ಗೊಂದಲ, ಆತಂಕ ಬೇಡ ಎಂದು ಹೇಳಿದ್ದಾರೆ


