ಬೆಂಗಳೂರು: “ದೊಡ್ಡ ನಗರಗಳಲ್ಲಿ ಜೀವನ ಒತ್ತಡದಿಂದ ಕೂಡಿದ್ದು, ನಾವೆಲ್ಲರೂ ಯಂತ್ರಗಳಂತೆ ಕೆಲಸ ಮಾಡುತ್ತಿದ್ದೇವೆ. ಹೆಚ್ಚುತ್ತಿರುವ ವಾಯು ಮಾಲಿನ್ಯವು ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಜನರು ನಗರ ಬಿಟ್ಟು ಹಳ್ಳಿಗಳಿಗೆ ಓಡಿಹೋಗುವ ಕಾಲ ಬರುತ್ತದೆ ಎಂದು ಸಂಸದ ಹಾಗೂ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಲಾಲ್‌ಬಾಗ್‌ನಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ತೋಟಗಾರಿಕಾ ಇಲಾಖೆ ಆಯೋಜಿಸಿದ್ದ ‘ಎರಡನೇ ರಾಷ್ಟ್ರೀಯ ಮರಗೆತ್ತನೆ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಧೂಮಪಾನಕ್ಕಿಂತ ಮಾರಕ ವಾಯು ಮಾಲಿನ್ಯ
ವಾಯು ಮಾಲಿನ್ಯದ ಭೀಕರತೆಯನ್ನು ಅಂಕಿಅಂಶಗಳ ಸಮೇತ ವಿವರಿಸಿದ ಅವರು, “ಕಳೆದ ವರ್ಷ ದೇಶದಲ್ಲಿ ವಾಯು ಮಾಲಿನ್ಯದಿಂದ 22 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಆದರೆ ಧೂಮಪಾನದಿಂದ ಮೃತಪಟ್ಟವರ ಸಂಖ್ಯೆ 14 ಲಕ್ಷ ಮಾತ್ರ. ವಾಯು ಮಾಲಿನ್ಯ ಎಂಬುದು ಕೇವಲ ಉಸಿರಾಟದ ಸಮಸ್ಯೆಯಲ್ಲ, ಅದೊಂದು ‘ಕೃತಕ ಧೂಮಪಾನ’. ಇದು ಹೃದಯಾಘಾತ, ಗರ್ಭಪಾತ ಮತ್ತು ಜನಿಸುವ ಮಗುವಿನ ತೂಕ ಕಡಿಮೆಯಾಗುವಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ” ಎಂದು ತಿಳಿಸಿದರು.
ನಗರ ಪ್ರದೇಶಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ಇಂದು ನಗರಗಳಲ್ಲಿ ಅಂತರ್ಜಲ ಕುಸಿಯುತ್ತಿದೆ ಮತ್ತು ಅಂತರ್ಜಾಲ ಹೆಚ್ಚಾಗುತ್ತಿದೆ. ವಾಹನಗಳ ದಟ್ಟಣೆ, ಕಟ್ಟಡಗಳ ಧೂಳು ಮತ್ತು ಕೈಗಾರಿಕೆಗಳಿಂದ ಹೊರಸೂಸುವ ಅನಿಲಗಳಿಂದಾಗಿ ದೆಹಲಿಯಂತಹ ನಗರಗಳಲ್ಲಿ ಎದುರಿಗಿರುವ ಮನುಷ್ಯರೇ ಕಾಣಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದರು.
ನಗರಕ್ಕೆ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಇನ್ನೂ ಮೂರ್ನಾಲ್ಕು ಉದ್ಯಾನವನಗಳ ಅವಶ್ಯಕತೆ ಇದೆ. ಇಲ್ಲಿ ಮರಗಳಿಂದ ಕಲಾಕೃತಿ ರಚಿಸಿರುವ ಈ ಕಲಾವಿದರೇ ನಿಜವಾದ ಪರಿಸರದ ಹಿರೋಗಳಾಗಿದ್ದಾರೆ. ನಮ್ಮ ಬದುಕಿಗೆ ನಿಜವಾದ ಫೇಸ್ ಮೇಕರ್ ಪರಿಸರವಾಗಿದ್ದು ಇದನ್ನು ನಾವು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.


