ಕ್ಯಾಪ್ಟನ್ಸಿ ತೊರೆದ ಧೋನಿ (Dhoni)ಆಟಗಾರನಾಗಿ ಮತ್ತೊಂದು ಟೈಟಲ್ ಗೆಲುವಿನ ಭಾಗವಾಗ್ತಾರಾ? ಈ ಬಾರಿ ಕಪ್ ನಮ್ದೇ ಎಂಬ ಹಳೆಯ ಡೈಲಾಗ್ ಹೊಡೆಯುತ್ತಾ ಮೊದಲ ಟ್ರೋಫಿಗಾಗಿ ಎದಿರು ನೋಡ್ತಿರುವ ಕೊಹ್ಲಿ(Kohli) ನಿರೀಕ್ಷಣೆ ಫಲಿಸುತ್ತಾ? ನಾಯಕತ್ವ ಕಳೆದುಕೊಂಡ್ರೂ ರೋಹಿತ್ ಶರ್ಮಾ (Rohit Sharma) ತನ್ನ ಅಬ್ಬರದ ಬ್ಯಾಟಿಂಗ್ ಮೂಲಕ ಮುಂಬೈಗೆ ಮತ್ತೊಂದು ಕಪ್ ಕೊಡ್ತಾರಾ? ಸಾವಿನ ಸನಿಹಕ್ಕೆ ಹೋಗಿ ಬಂದು ಮತ್ತೆ ಅಂಗಳಕ್ಕೆ ಕಾಲಿಟ್ಟ ಪಂತ್ (Rishab Pant), ಆಟಗಾರನಾಗಿ, ನಾಯಕನಾಗಿ ಕಮಾಲ್ ಮಾಡ್ತಾರಾ? ಮುಂಬೈ ಅಭಿಮಾನಿಗಳ ಆಸೆಗೆ ವಿರುದ್ಧವಾಗಿ ನಾಯಕತ್ವ ಪಡೆದ ಪಾಂಡ್ಯ (Hardik pandya)ತನ್ನ ಆಟ, ತಂತ್ರಗಳ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆಲ್ತಾರಾ? ಇಂತಹ ಹತ್ತಾರು ಪ್ರಶ್ನೆಗಳಿಗೆ ಇಂದಿನಿಂದ ಶುರುವಾಗಲಿರುವ ಐಪಿಎಲ್ ಹಬ್ಬ (IPL Fest) ಉತ್ತರ ಕೊಡಲಿದೆ.
ಯೆಸ್, ಚೆನ್ನೈ ವೇದಿಕೆಯಲ್ಲಿ ಐಪಿಎಲ್ನ 17ನೇ ಆವೃತ್ತಿ ಶುರುವಾಗಲಿದೆ. ಕಳೆದ ವರ್ಷದಂತೆ 10 ತಂಡ, 74 ಪಂದ್ಯಗಳ ಮೆಗಾ ಟೂರ್ನಿಗೆ ಐಪಿಎಲ್ ಆಡಳಿತ ಮಂಡಳಿ ಸಜ್ಜಾಗಿದೆ. ಆದರೆ, ಲೋಕಸಭೆ ಚುನಾವಣೆ ಕಾರಣ ಮೊದಲ ಹಂತದಲ್ಲಿ 21 ಪಂದ್ಯಗಳಿಗೆ ಶೆಡ್ಯೂಲ್ ಪ್ರಕಟವಾಗಿದೆ.
ಇಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಡಿಫೆಂಡಿಂಗ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(CSK), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಖಾಮುಖಿ ಆಗಲಿವೆ. ಚೆಪಾಕ್ ಅಂಗಳದಲ್ಲಿ ಆರಂಭಿಕ ಪಂದ್ಯಕ್ಕೆ ಮುನ್ನ ಪ್ರತ್ಯೇಕ ಮತ್ತು ವಿಶೇಷ ಕಾರ್ಯಕ್ರಮಗಳು ಇರಲಿವೆ. ಎಆರ್ ರೆಹಮಾನ್, ಸೋನು ನಿಗಮ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಮತ್ತಿತರ ಸೆಲೆಬ್ರಿಟಿಗಳು ರಂಜಿಸಲಿದ್ದಾರೆ.
ಕಳೆದ ಆವೃತ್ತಿ ಮಾದರಿಯಲ್ಲಿಯೇ ಪ್ರತಿ ತಂಡಕ್ಕೂ 14 ಪಂದ್ಯಗಳನ್ನು ಆಡುವ ಚಾನ್ಸ್ ಸಿಗಲಿದೆ. ಲೀಗ್ ಹಂತದಲ್ಲಿ 70, ಪ್ಲೇ ಆಫ್ಸ್ನಲ್ಲಿ 4 ಪಂದ್ಯಗಳು ಇರಲಿವೆ. ಫೈನಲ್ ಪಂದ್ಯ ಮೇ 26ರಂದು ನಡೆಯುವ ಸಂಭವ ಇದೆ.
16 ಸೀಸನ್ಗಳಲ್ಲಿ ಚೆನ್ನೈ, ಮುಂಬೈ ತಲಾ ಐದು ಬಾರಿ, ಕೊಲ್ಕೊತಾ 2 ಬಾರಿ ಟೈಟಲ್ ಗೆದ್ದಿವೆ. ಡೆಕ್ಕನ್ ಚಾರ್ಜರ್ಸ್, ಸನ್ರೈಸರ್ಸ್ ಹೈದ್ರಾಬಾದ್, ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್ ತಲಾ ಒಮ್ಮೆ ಟ್ರೋಫಿ ಗೆದ್ದಿವೆ.