ಮಂಡ್ಯ: ಶ್ರೀಕ್ಷೇತ್ರ ಧರ್ಮಸ್ಥಳದ ಪ್ರಾವಿತ್ಯತೆ ಎತ್ತಿಹಿಡಿಯುವ ಹಿನ್ನೆಲೆ ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿದ ಪರಿಣಾಮ ಸತ್ಯಾಂಶ ಹೊರ ಬಂದಿದೆ. ಸರ್ಕಾರದ ಬಗ್ಗೆ ಮಾಡಿದ ಅಪಪ್ರಚಾರದಿಂದ ಬಿಜೆಪಿ ನಾಯಕರಿಗೆ ಮುಖಭಂಗವಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ಮಂಡ್ಯದ ಕೊಪ್ಪ ಗ್ರಾಮದಲ್ಲಿ ಮಾತನಾಡಿದ ಅವರು ಸೌಜನ್ಯ ಎಂಬ ಯುವತಿಯ ಸಾವಿನ ಪ್ರಕರಣವನ್ನಿಟ್ಟುಕೊಂಡು ಕೆಲ ಕಿಡಿಗೇಡಿಗಳು ಹಲವು ವರ್ಷಗಳಿಂದ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದ್ರು.
ರಾಜ್ಯ ಸರ್ಕಾರ ಕೋರ್ಟ್ ಆದೇಶದ ಮೇರೆಗೆ ಎಸ್ಐಟಿ ತಂಡ ರಚಿಸಿ ಸಮಗ್ರ ತನಿಖೆ ನಡೆಸಿದ ಪರಿಣಾಮ ಸತ್ಯಾಂಶ ಹೊರಬಂದಿದೆ. ಶ್ರೀ ಕ್ಷೇತ್ರದ ಮೇಲೆ ಇದ್ದಂತಹ ಕಳಂಕ ಇದೀಗ ಮುಕ್ತವಾಗಿದೆ. ಹೀಗಾಗಿ ಬಿಜೆಪಿ ನಾಯಕರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು. ಬಿಜೆಪಿ ಸರ್ಕಾರ ಇದ್ದಾಗಲೇ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಆರ್. ಅಶೋಕ್ ಡಿಸಿಎಂ ಆಗಿದ್ದರು. ಆದರೆ ಅವರ ಸರ್ಕಾರವಿದ್ದಾಗಲೇ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಪ್ರಕರಣ ಮುಕ್ತಾಯಗೊಳಿಸಬಹುದಿತ್ತು. ಅವರಿಗೆ ಕ್ಷೇತ್ರದ ಮೇಲೆ ಬದ್ಧತೆ ಹಾಗೂ ಗೌರವವಿಲ್ಲ ಎಂದು ಟೀಕಿಸಿದರು.
ಈಗ ಕಾಂಗ್ರೆಸ್ ಸರ್ಕಾರ ಕ್ರಮ ತಗೋಬೇಕು ಎಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಾ ಶ್ರೀಕ್ಷೇತ್ರದ ಭಕ್ತಾದಿಗಳು ಮತ್ತು ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ.ಹೀಗಾಗಿ ನಮ್ಮ ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದೆ ಎಂದ್ರು
ಡಿಕೆಶಿ ಬಿಜೆಪಿಗೆ ಹೋಗ್ತಾರೆ ಎಂದು ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿಗೆ ಯಾಕೆ ಹೋಗುತ್ತಾರೆ. ಹೋಗುವುದಾಗಿದ್ದರೆ ಎಂದೋ ಹೋಗುತ್ತಿದ್ದರು. ಡಿಕೆಶಿ ಕಾಂಗ್ರೆಸ್‌ನಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದಾರೆ. ರಾಷ್ಟ್ರದಲ್ಲಿ ಒಳ್ಳೆಯ ಅಧ್ಯಕ್ಷರಾಗಿ ಪ್ರಶಂಸೆ ಪಡೆದಿದ್ದಾರೆ. ಅವರು ಏಕೆ ಬಿಜೆಪಿಗೆ ಹೋಗುತ್ತಾರೆ. ಸಂದರ್ಭ ಬಂದಾಗ ಅವರು ಸಿಎಂ ಆಗುತ್ತಾರೆ. ಅವರನ್ನು ಪಕ್ಷದ ವರಿಷ್ಠರು ಸಿಎಂ ಮಾಡೋ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರದ ಬಿಜೆಪಿ ಸರ್ಕಾರ ಇ.ಡಿ., ಐಟಿ ಹಾಗೂ ಸಿಬಿಐ ತನಿಖೆ ಸಂಸ್ಥೆಗಳಿಂದ ವಿರೋಧ ಪಕ್ಷಗಳನ್ನು ನಿಯಂತ್ರಣದಲ್ಲಿಡಲು ಷಡ್ಯಂತ್ರ ನಡೆಸುತ್ತಿದೆ. ತನಿಖಾ ಸಂಸ್ಥೆಗಳು ಕೇಂದ್ರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿವೆ ಆಕ್ರೋಶ ವ್ಯಕ್ತಪಡಿಸಿದರು.