ನಮ್ಮ ಅಡುಗೆ ಮನೆಯಲ್ಲಿರುವ ಸಾಂಪ್ರದಾಯಿಕ ಆಹಾರ ಪದಾರ್ಥಗಳಲ್ಲಿ ಅಗಸೆ ಬೀಜಗಳು (Flax Seeds) ಅತ್ಯಂತ ಶಕ್ತಿಶಾಲಿ ಪೋಷಕಾಂಶಗಳ ಗಣಿ. ಆದರೆ ಇವುಗಳನ್ನು ಸರಿಯಾದ ಕ್ರಮದಲ್ಲಿ ಸೇವಿಸಿದರೆ ಮಾತ್ರ ದೇಹಕ್ಕೆ ಸಂಪೂರ್ಣ ಪ್ರಯೋಜನಗಳು ಸಿಗುತ್ತವೆ ಎಂದು ತಜ್ಞರು ತಿಳಿಸಿದ್ದಾರೆ. ಅಗಸೆ ಬೀಜಗಳನ್ನು ಇಡೀದಾಗಿ ತಿನ್ನುವ ಬದಲು, ಪುಡಿ ಮಾಡಿ ಸೇವಿಸುವುದು ಅತ್ಯುತ್ತಮ ವಿಧಾನ. ಯಾಕೆಂದರೆ ಇದರಿಂದ ದೇಹವು ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ.
ಪ್ರತಿದಿನ 1 ಅಥವಾ 2 ಚಮಚ ಅಗಸೆ ಪುಡಿ ಸೇವಿಸುವುದರಿಂದ ಸಿಗುವ ಪ್ರಯೋಜನಗಳು ಇಲ್ಲಿವೆ:
ಹೃದಯದ ರಕ್ಷಾ ಕವಚ: ಅಗಸೆ ಬೀಜದಲ್ಲಿರುವ ಒಮೆಗಾ-3 ಫ್ಯಾಟಿ ಆಸಿಡ್ ಮತ್ತು ನಾರಿನಂಶವು ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡುತ್ತದೆ. ಅಧ್ಯಯನಗಳ ಪ್ರಕಾರ, ಮೂರು ತಿಂಗಳುಗಳ ಕಾಲ ಪ್ರತಿದಿನ 30 ಗ್ರಾಂ ಅಗಸೆ ಪುಡಿ ಸೇವಿಸಿದರೆ ಕೊಲೆಸ್ಟ್ರಾಲ್ ಮಟ್ಟದಲ್ಲಿ ಸುಮಾರು 15% ರಷ್ಟು ಇಳಿಕೆ ಕಾಣಬಹುದು. ಇದು ಹೃದ್ರೋಗದ ಅಪಾಯವನ್ನು ತಡೆಯುತ್ತದೆ.

ಮಧುಮೇಹ ನಿಯಂತ್ರಣ: ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶವು ರಕ್ತದಲ್ಲಿ ಸಕ್ಕರೆ ಅಂಶ ದಿಢೀರ್ ಏರಿಕೆಯಾಗುವುದನ್ನು ತಡೆಯುತ್ತದೆ. ಇದು ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುವ ಮೂಲಕ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ ಮತ್ತು ತೂಕ ಇಳಿಕೆ: ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಅಗಸೆ ಬೀಜಗಳು ವರದಾನ. ಇದು ಕರುಳಿನ ಆರೋಗ್ಯವನ್ನು ಸುಧಾರಿಸಿ, ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಅಲ್ಲದೆ, ಇದು ಹಸಿವಿನ ಹಾರ್ಮೋನುಗಳನ್ನು ನಿಯಂತ್ರಿಸಿ ಪದೇ ಪದೇ ಆಹಾರ ಸೇವಿಸುವುದನ್ನು ತಡೆಯುತ್ತದೆ, ಇದರಿಂದ ತೂಕ ಇಳಿಕೆ ಸುಲಭವಾಗುತ್ತದೆ.

ಹೊಳೆಯುವ ಚರ್ಮ ಮತ್ತು ಸದೃಢ ಕೂದಲು: ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಒಮೆಗಾ-3 ಅಂಶವು ಚರ್ಮವನ್ನು ತೇವಗೊಳಿಸಿ ಮೊಡವೆಗಳನ್ನು ಕಡಿಮೆ ಮಾಡುತ್ತದೆ. ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಿ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಟ: ಅಗಸೆ ಬೀಜಗಳಲ್ಲಿರುವ ‘ಲಿಗ್ನಾನ್‌ಗಳು’ ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ನೆರವಾಗುತ್ತದೆ.

ಮೂಳೆಗಳ ಆರೋಗ್ಯ: ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಖನಿಜಗಳು ಇದರಲ್ಲಿ ಸಮೃದ್ಧವಾಗಿವೆ. ಇದು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಿ ಆಸ್ಟಿಯೊಪೊರೋಸಿಸ್ ಅಂತಹ ಸಮಸ್ಯೆಗಳನ್ನು ದೂರವಿಡುತ್ತದೆ.



