ಗೋರಕ್ಷಕ ‘ಫರ್ಸಾ ವಾಲೆ ಬಾಬಾ’ ಭೀಕರ ಹತ್ಯೆ; ಭಕ್ತರಿಂದ ಹೆದ್ದಾರಿ ಬಂದ್!

ಉತ್ತರ ಪ್ರದೇಶ: ಮಥುರಾದಲ್ಲಿ ಗೋರಕ್ಷಕ ಚಂದ್ರಶೇಖರ್ ಅಲಿಯಾಸ್ ‘ಫರ್ಸಾ ವಾಲೆ ಬಾಬಾ’ ಅವರ ಭೀಕರ ಹತ್ಯೆ ನಡೆದಿದ್ದು, ಈ ಘಟನೆಯು ಇಡೀ ಜಿಲ್ಲೆಯಲ್ಲಿ ಭಾರೀ ಉದ್ವಿಗ್ನತೆಗೆ ಕಾರಣವಾಗಿದೆ. ಮಥುರಾ ಜಿಲ್ಲೆಯ ನವಿಪುರ ಗ್ರಾಮದ ಸಮೀಪ ಈ ದುರಂತ ಸಂಭವಿಸಿದ್ದು, ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟ್ರಕ್ ಅನ್ನು ಬಾಬಾ ಅವರು ತಮ್ಮ ಬೈಕ್‌ನಲ್ಲಿ ಬೆನ್ನಟ್ಟಿದ್ದರು. ಗೋವುಗಳ ಕಳ್ಳಸಾಗಣೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಟ್ರಕ್‌ನಲ್ಲಿದ್ದ ನಾಲ್ವರು ಆರೋಪಿಗಳು ಉದ್ದೇಶಪೂರ್ವಕವಾಗಿ ಬಾಬಾ ಅವರ ಬೈಕ್ ಮೇಲೆ ವಾಹನ ಚಲಾಯಿಸಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈದ್ ಹಬ್ಬದ ಸಂಭ್ರಮದ ನಡುವೆಯೇ ಈ ಹತ್ಯೆ ನಡೆದಿರುವುದು ಸ್ಥಳೀಯರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದ್ದು, ಮಥುರಾದ ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಉದ್ರಿಕ್ತ ಭಕ್ತರು ಮತ್ತು ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಹತ್ಯೆಯಿಂದ ಕೆರಳಿದ ಗುಂಪು ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಸ್ಥಳಕ್ಕೆ ಬಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಈ ಸಂಘರ್ಷದ ವೇಳೆ ಪೊಲೀಸ್ ಅಧಿಕಾರಿಗಳ ವಾಹನಗಳ ಗಾಜುಗಳು ಪುಡಿಯಾಗಿದ್ದು, ಪರಿಸ್ಥಿತಿ ಕೈಮೀರಿ ಹೋಗುವುದನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಹೆದ್ದಾರಿಯಲ್ಲಿ ಉಂಟಾದ ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ಅಶ್ರವಾಯು ಪ್ರಯೋಗಿಸಿ, ಲಾಠಿಚಾರ್ಜ್ ನಡೆಸುವ ಮೂಲಕ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ. ಸದ್ಯ ಮಥುರಾದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರು, ಗೋರಕ್ಷಕನ ಹತ್ಯೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ತನಿಖೆಯನ್ನು ಚುರುಕುಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ.




