ಸುದ್ದಿ

ರಾಜ್ಯಪಾಲರಿಗೆ ಅವಮಾನ ಮಾಡಿದ ಎಲ್ಲ ಕಾಂಗ್ರೆಸ್ಸಿಗರ ವಿರುದ್ಧ ಪ್ರಕರಣ ದಾಖಲಿಸಿ- ಗೋವಿಂದ ಕಾರಜೋಳ ಆಗ್ರಹ


ಬೆಂಗಳೂರು: ಕೂಡಲೇ ಐವನ್ ಡಿಸೋಜಾ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಮಾನ್ಯ ರಾಜ್ಯಪಾಲರಿಗೆ ಅವಮಾನ ಮಾಡಿದ ಎಲ್ಲ ಕಾಂಗ್ರೆಸ್ಸಿಗರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾಗಿ ಸಂಸದ ಗೋವಿಂದ ಕಾರಜೋಳ ಅವರು ತಿಳಿಸಿದರು.
ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ಇಂದು ಭೇಟಿ ನೀಡಿ ದೂರು ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಕಾಂಗ್ರೆಸ್ಸಿನದು ಸರಕಾರಿ ಪ್ರೇರೇಪಿತ ಪ್ರತಿಭಟನೆ. ಅಧಿಕಾರ ದುರುಪಯೋಗ ಮಾಡಿಕೊಂಡು ರಾಜ್ಯಪಾಲರಿಗೆ ಅವಮಾನ ಮಾಡುವಂತೆ ನಡೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.
ಪ್ರತಿಭಟನೆ ನಡೆಸುವ ವೇಳೆ ಮಾನ್ಯ ರಾಜ್ಯಪಾಲರ ಫೋಟೊಗೆ ಚಪ್ಪಲಿಯಿಂದ ಹೊಡೆದುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಟೀಕಿಸಿದರು. ಎಂಎಲ್‌ಸಿ ಐವಾನ್ ಡಿಸೋಜ ಅವರು ರಾಜ್ಯಪಾಲರಿಗೆ ಧಮ್ಕಿ ಹಾಕುವ ರೀತಿ ಮಾತನಾಡಿದ್ದಾರೆ. ಬಾಂಗ್ಲಾದ ಪರಿಸ್ಥಿತಿ ಕರ್ನಾಟಕದಲ್ಲೂ ಬರಲಿದೆ; ರಾಜಭವನಕ್ಕೆ ನುಗ್ಗಿ ರಾಜ್ಯಪಾಲರನ್ನು ಓಡಿಸುವುದಾಗಿ ತಿಳಿಸಿದ್ದು, ಐವಾನ್ ಡಿಸೋಜ ಅವರಿಗೆ ಪಾಕ್ ಉಗ್ರರ ನಂಟಿದೆಯೇ ಎಂಬ ಸಂಶಯ ಬರುತ್ತಿದೆ. ಅವರ ಹೇಳಿಕೆ ಖಂಡನೀಯ ಎಂದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಐವನ್ ಡಿಸೋಜಾ ಅವರ ಹೇಳಿಕೆ ಬಗ್ಗೆ ಗಮನ ಸೆಳೆದಿದ್ದೇವೆ. ಜಮೀರ್ ಅಹ್ಮದ್ ಹೇಳಿಕೆಯನ್ನೂ ಪ್ರಸ್ತಾಪಿಸಿದ್ದೇವೆ. ಕೃಷ್ಣಬೈರೇಗೌಡರು ಸೇರಿ ಕಾಂಗ್ರೆಸ್ಸಿನ ಅನೇಕ ಪ್ರಮುಖರ ನಿಂದನಾ ಟೀಕೆಗಳ ಕುರಿತು ವಿವರಿಸಿದ್ದಾಗಿ ಹೇಳಿದರು.
ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ್, ಶಾಸಕ ಅವಿನಾಶ್ ಜಾಧವ್, ಎಸ್‌ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಮಾಜಿ ಸಂಸದ ಮುನಿಸ್ವಾಮಿ ಅವರು ಇದ್ದರು.

Comments (0)

Your email address will not be published. Required fields are marked *

Back to top button