ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕರರಿಗೆ ಎಸ್ಮಾ ಜಾರಿ ಮಾಡುವ ಮೂಲಕ ರಾಜ್ಯ ಸರ್ಕಾರ ಶಾಕ್ ನೀಡಿದೆ.
ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರು ಪ್ರತಿಭಟನೆ ನಡೆಸದಂತೆ ಎಸ್ಮಾ ಜಾರಿ ಮಾಡಿದ್ದು, ಮುಂದಿನ 6 ತಿಂಗಳು ಎಸ್ಮಾ ಜಾರಿಯಾಗಿರುವ ಹಿನ್ನೆಲೆ ಯಾವುದೇ ಮುಷ್ಕರವನ್ನು ನಡೆಸುವಂತಿಲ್ಲ.
ಇಂದಿನಿಂದ 6 ತಿಂಗಳು ನೌಕರರು ಯಾವುದೇ ಮುಷ್ಕರದಲ್ಲಿ ಭಾಗಿಯಾಗದಂತೆ ಎಸ್ಮಾ ಜಾರಿಗೊಳಿಸಲಾಗಿದೆ. ಜು.1 ರಿಂದ ಡಿ.31 ರ ವರೆಗೆ ನಿಗಮದಲ್ಲಿ ಮುಷ್ಕರ ನಿರ್ಬಂಧಿಸಿ ಕೆಎಸ್‌ಆರ್‌ಟಿಸಿ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಲಾಗಿದೆ.
ಎಸ್ಮಾ ಅಂದರೆ ಸರ್ಕಾರಿ ನೌಕರರ ಮೇಲೆ ಅಂಕುಶ ಹಾಕುವ ಕಾಯ್ದೆಯಾಗಿದೆ. ಸರ್ಕಾರಿ ನೌಕರರು ಸಾಮೂಹಿಕ ಪ್ರತಿಭಟನೆಗೆ ಮುಂದಾದ್ರೆ ತಡೆಯುವ ಸಲುವಾಗಿ ಎಸ್ಮಾ ಜಾರಿ ಮಾಡಲಾಗುತ್ತದೆ. ಎಸ್ಮಾ ಜಾರಿಯಾದ್ರೆ ಕಡ್ಡಾಯವಾಗಿ ನೌಕರರು ಕೆಲಸಕ್ಕೆ ಹಾಜರಾಗಬೇಕಾಗುತ್ತದೆ. ಎಸ್ಮಾ ಕಾಯ್ದೆ ಉಲ್ಲಂಘನೆ ಮಾಡಿದರೆ ವಾರಂಟ್ ಇಲ್ಲದೇ ಬಂಧನ ಮಾಡಬಹುದಾಗಿದೆ. ಅಲ್ಲದೇ ಆರು ತಿಂಗಳು ಜೈಲು ವಾಸಕ್ಕೂ ಅವಕಾಶ ಇದೆ.
ಸಾರಿಗೆ ನೌಕರರಿಗೆ 38 ತಿಂಗಳಿನಿಂದ ಭತ್ಯೆ ಮತ್ತು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗಸ್ಟ್ 5ರಂದು ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಇದರಂತೆ ರಾಜ್ಯದ ಕೆಎಸ್‌ಆರ್‌ಟಿಸಿ,, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಆದ್ರೆ ಇದೀಗ ಸಾರಿಗೆ ನೌಕರರಿಗೆ ಹಿನ್ನೆಡೆಯಾಗಿದೆ.


