ಆನೇಕಲ್: ಲಿವಿಂಗ್ ಟುಗೆದರ್ ನಲ್ಲಿದ್ದ ಜೋಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕಲ್ಲುಬಾಳು ಗ್ರಾಮದಲ್ಲಿ ನಡೆದಿದೆ.. ಮೃತರನ್ನು ಒಡಿಶಾ ಮೂಲದ ಸೀಮಾ ನಾಯಕ್(25) ಮತ್ತು ರಾಕೇಶ್(23) ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಎರಡು ದಿನಗಳಿಂದ ಮನೆ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯರು ಅನುಮಾನಗೊಂಡು ಕಿಟಕಿ, ಗಾಜು ಒಡೆದು ಪರಿಶೀಲನೆ ಮಾಡಿದಾಗ ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ, ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್, ಜಿಗಣಿ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮೃತ ರಾಕೇಶ್ ಹಣಕ್ಕಾಗಿ ಪದೇ ಪದೇ ಕುಡಿದು ಜಗಳ ಮಾಡುತ್ತಿದ್ದ. ಭಾನುವಾರ ಸಹ ಹಣಕ್ಕಾಗಿ ಸೀಮಾ ಜೊತೆ ಜಗಳ ಮಾಡಿದ್ದ. ಹಣ ನೀಡುವುದಿಲ್ಲ ಎಂದು ಸೀಮಾ ಮಲಗಿದ್ದಳು. ಬೆಳಿಗ್ಗೆ ಎದ್ದು ನೋಡಿದಾಗ ರಾಕೇಶ್ ನೇಣು ಬಿಗಿದುಕೊಂಡಿದ್ದ. ಹಗ್ಗ ತುಂಡರಿಸಿ ಬದುಕಿಸಲು ಪ್ರಯತ್ನ ಮಾಡಿದಾಗ ಮೃತಪಟ್ಟಿರುವುದು ಖಾತ್ರಿಯಾಗಿದೆ. ಬಳಿಕ ಸೀಮಾ ಕೂಡ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿಸಿದ್ದಾರೆ


