ಮೈಸೂರು- ಅಯೋಧ್ಯೆಧಾಮ, ರೈಲು ಸುಟ್ಟು ಹಾಕುವುದಾಗಿ ಬೆದರಿಸಿದ್ದ ದಾಳಿ ಪ್ರಕರಣ ವಿಧಾನಪರಿಷತ್ನಲ್ಲಿ ಪ್ರತಿಧ್ವನಿಸಿತು.ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ ಪ್ರಶ್ನೋತ್ತರ ಕಲಾಪವನ್ನು ಪ್ರಾರಂಭಿಸಲು ಮುಂದಾದರು. ಆಗ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರು ವಿಷಯ ಪ್ರಸ್ತಾಪಿಸಿದರು.
ಹೊಸಪೇಟೆ ಬಳಿ ಅಯೋಧ್ಯೆ ರೈಲಿಗೆ ನುಗ್ಗಿದ ದುಷ್ಕರ್ಮಿಗಳು ರಾಮ ಭಕ್ತರಿಗೆ ಧಮಕಿ ಹಾಕಿದ್ದಾರೆ. ರೈಲಿಗೆ ಬೆಂಕಿಹಾಕುವುದಾಗಿ ಬೆದರಿಸಿದ್ದಾರೆ. ಈ ಕುರಿತು ಸರ್ಕಾರದಿಂದ ಈವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಅವರು ಗೋದ್ರಾ ಹತ್ಯಾಕಾಂಡ ಬಗ್ಗೆ ಮಾತನಾಡಿದ್ದರು. ಈಗ ಈ ಘಟನೆ ನಡೆದಿದೆ, ಆರೋಪಿಗಳನ್ನು ಬಂಸಿದ್ದ ಪೋಲೀಸರು ಮತ್ತೆ ಬಿಟ್ಟು ಕಳುಹಿಸಿದ್ದಾರೆ ಎಂದು ಕಿಡಿಕಾರಿದರು.
ಆಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಏನು ಇದಕ್ಕೊಂದು ರೀತಿ ನೀತಿ ಬೇಡವೆ. ಕಲಾಪದಲ್ಲಿ ನಿಯಮ ಇದೆ, ಯಾವ ನಿಯಮದಲ್ಲಿ ಪ್ರಶ್ನಿಸಬೇಕು ಎಂಬುದು ಗೊತ್ತಿಲ್ಲವೇ? ಎಂದು ಗರಂ ಆದರು.
ಈ ವೇಳೆ ಆಡಳಿತ ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶ ಕೊಡುತ್ತೇನೆ,ಈಗ ಬೇಡ ಎಂದು ಸಭಾಪತಿ ಬಸವರಾಜ ಹೊರಟ್ಟಿ ಗದ್ದಲಕ್ಕೆ ತೆರೆ ಎಳೆದರು.