ಸ್ಪೇನ್: ಸ್ಪೇನ್‌ನ ದಕ್ಷಿಣ ಪ್ರಾಂತ್ಯವಾದ ಆಂಡಲೂಸಿಯಾದಲ್ಲಿ ಭಾನುವಾರ ಸಂಜೆ ನಡೆದ ಭೀಕರ ರೈಲು ಅಪಘಾತದಲ್ಲಿ 21 ಜನರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಎರಡು ಹೈಸ್ಪೀಡ್ ರೈಲುಗಳ ನಡುವೆ ಸಂಭವಿಸಿದ ಈ ಡಿಕ್ಕಿ ದೇಶವನ್ನೇ ಬೆಚ್ಚಿಬೀಳಿಸಿದೆ.
ಸ್ಪೇನ್‌ನ ರೈಲು ಜಾಲ ನಿರ್ವಾಹಕ ‘ಅಡಿಫ್’ ನೀಡಿರುವ ಮಾಹಿತಿಯ ಪ್ರಕಾರ, ಮಲಗಾದಿಂದ ಮ್ಯಾಡ್ರಿಡ್‌ಗೆ ಪ್ರಯಾಣಿಸುತ್ತಿದ್ದ ರೈಲು ಅಡಾಮುಜ್ ಬಳಿ ಹಳಿ ತಪ್ಪಿ, ಪಕ್ಕದ ಹಳಿಗೆ ಸರಿದೆ. ಅದೇ ಸಮಯದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಮತ್ತೊಂದು ಹೈಸ್ಪೀಡ್ ರೈಲಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಭೀಕರತೆಗೆ ಎರಡೂ ರೈಲುಗಳ ಬೋಗಿಗಳು ನಜ್ಜುಗುಜ್ಜಾಗಿವೆ.
ದುರಂತದಲ್ಲಿ 21 ಮಂದಿ ಮೃತಪಟ್ಟಿದ್ದು, 73 ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾದ್ಯತೆ ಎಂದು ತಿಳಿಸಿದ್ದಾರೆ. ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರ ಪೈಕಿ 30 ಜನರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. “ಸಂಪೂರ್ಣವಾಗಿ ನವೀಕರಿಸಲಾದ ನೇರ ಹಳಿಯಲ್ಲೇ ಈ ಘಟನೆ ನಡೆದಿದೆ. ಹಳಿ ತಪ್ಪಿದ ಮೊದಲ ರೈಲು ತಾಂತ್ರಿಕವಾಗಿ ಹೊಸದಾಗಿತ್ತು, ಎಂದು ಸಚಿವರು ಮಾಹಿತಿ ನೀಡಿದ್ದಾರೆ.


