ಹೈದರಾಬಾದ್: ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಅಲ್ಲು ಅರ್ಜುನ್ ಅರೆಸ್ಟ್ ಆಗಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಹೈದರಾಬಾದ್ ಪೊಲೀಸರ ನಡೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಬಗ್ಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ವಿಧಾನಸಭೆಯಲ್ಲಿ ಸ್ಪಷ್ಟನೆ ನೀಡಿದ್ದು, ಪುಷ್ಪರಾಜ್ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾರೆ.
ಪುಷ್ಪ-2 ಪ್ರೀಮಿಯರ್ ಶೋನಲ್ಲಿ ಆಗಿದ್ದ ಕಾಲ್ತುಳಿತ ದುರಂತ ಪ್ರಕರಣ ಹೊತ್ತಿಸಿದ ಕಿಡಿ ಇದು. ಇದೇ ಪ್ರಕರಣದಲ್ಲಿ ಅಲ್ಲು ಅರ್ಜುನ್ ಜೈಲಿಗೆ ಹೋಗಿ ರಿಲೀಸ್ ಆದಾಗ ಅವನೇನು ದೇಶ ಕಾಯುವ ಸೈನಿಕಲ್ಲ, ಸಿನಿಮಾ ಮಾಡಿ ಹಣ ಮಾಡಿಕೊಂಡಿರುವ ನಟ ಅಷ್ಟೇ ಅಂತ ರೇವಂತ್ ರೆಡ್ಡಿ ಕಿಚಾಯಿಸಿದ್ದರು. ಇದೀಗ ಪುಷ್ಪರಾಜ್ ವಿರುದ್ಧ ವಿಧಾನಸಭೆ ಕಲಾಪದಲ್ಲಿ ಮತ್ತೆ ಸಿಎಂ ರೇವಂತ್ ರೆಡ್ಡಿ ಕಡ್ಡಿಗೀರಿದ್ದಾರೆ.
ಕಾಲ್ತುಳಿತಕ್ಕೆ ಅಲ್ಲು ಅರ್ಜುನ್ ಕಾರಣ.. ರೇವಂತ್ ರೆಡ್ಡಿ ಕೆಂಡ
ಪುಷ್ಪ-2 ಪ್ರೀಮಿಯರ್ ಶೋನಲ್ಲಿ ದುರಂತ ನಡೆದಿದ್ದೂ ಆಯಿತು. ನಟ ಅಲ್ಲು ಅರ್ಜುನ್ ಜೈಲಿಗೆ ಹೋಗಿ ಬಂದಿದ್ದೂ ಆಯ್ತು. ದುರಂತದಲ್ಲಿ ಬಲಿಯಾದ ರೇವತಿ ಕುಟುಂಬಕ್ಕೆ ಪರಿಹಾರ ನೀಡಿದ್ದೂ ಆಯ್ತು. ಆದರೆ ಈ ಪ್ರಕರಣ ಸಿಎಂ ರೇವಂತ್ ರೆಡ್ಡಿ ಹಾಗೂ ನಟ ಅಲ್ಲು ಅರ್ಜುನ್ ನಡುವಿನ ಯುದ್ಧಕ್ಕೆ ನಾಂದಿ ಹಾಡಿದೆ. ತೆಲಂಗಾಣ ವಿಧಾನಸಭಾ ಕಲಾಪದಲ್ಲಿ ಎಂಐಎಂ ಸದಸ್ಯ ಅಕ್ಬರುದ್ದೀನ್ ಒವೈಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ರೇವಂತ್ ರೆಡ್ಡಿ, ಅವನಿಗೆ ಮನುಷ್ಯತ್ವ ಏನಾದ್ರೂ ಇದ್ಯಾ ಅಂತ ಆಕ್ರೋಶದ ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಕಾಲ್ತುಳಿತ ದುರಂತಕ್ಕೆ ನಟ ಅಲ್ಲು ಅರ್ಜುನ್ ಅವರೇ ಕಾರಣ ಅಂತ ಬೆಂಕಿ ಮಾತುಗಳಲ್ಲಿ ಕಿಡಿಕಾರಿದ್ದಾರೆ.
ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಹೊರಗೆ ಕರೆದುಕೊಂಡು ಬಂದು ಗಾಡಿ ಹತ್ತಿಸಿದ್ರೆ ಮತ್ತೆ ರೂಫ್ ಟಾಪ್ ಓಪನ್ ಮಾಡಿ, ಕೈ ಬೀಸುತ್ತಾ ರೋಡ್ಶೋ ಮಾಡ್ಕೊಂಡು ಹೋದ್ರು. ಒಬ್ಬ ತಾಯಿ ಸಾವನ್ನಪ್ಪಿದ್ದು, ಮಗ ಗಂಭೀರವಾಗಿದ್ರೂ ಹಿಂದಕ್ಕೆ ಹೋಗಿ ಅಂದ್ರೂ ಮತ್ತೆ ಅಭಿಮಾನಿಗಳಿಗೆ ಕೈ ಬೀಸುತ್ತಾ ರೋಡ್ ಶೋ ಮಾಡಿದ್ದಾರೆ.
ಅವನಿಗೆ ಮನುಷ್ಯತ್ವ ಇದ್ಯಾ.. ರೇವಂತ್ ರೆಡ್ಡಿ ರಣಾರ್ಭಟ!
ಇನ್ನು, ಜೈಲಿನಿಂದ ಬಿಡುಗಡೆಯಾದ ಬಳಿಕ ಅಲ್ಲು ಅರ್ಜುನ್ ಭೇಟಿ ಮಾಡಿದ ಸ್ಟಾರ್ ನಟರ ವಿರುದ್ಧವೂ ಸಿಎಂ ರೇವಂತ್ ರೆಡ್ಡಿ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಅಲ್ಲು ಅರ್ಜುನ್ ಕಾಲು ಕಳೆದುಕೊಂಡಿದ್ದಾರಾ, ಕಣ್ಣು ಕಳೆದುಕೊಂಡಿದ್ದರಾ, ಅಭಿಮಾನಿ ಸತ್ತರೂ ಆತ ಕಿಂಚಿತ್ತೂ ತಲೆ ಕೆಡಿಸಿಕೊಳ್ಳಲಿಲ್ಲ. ಘಟನೆಯಲ್ಲಿ ಗಾಯಗೊಂಡಿದ್ದ ಬಾಲಕನ ಮೆದುಳು ನಿಷ್ಕ್ರಿಯವಾಗಿದೆ. ಮಹಿಳೆ ಸತ್ತು, ಮಗು ಸಾವು-ಬದುಕಿನ ನಡುವೆ ಹೋರಾಡ್ತಿದ್ರೂ ಆತ ಸಿನಿಮಾ ನೋಡಿಯೇ ಆಚೆ ಬಂದಿದ್ದಾನೆ. ಮನುಷ್ಯತ್ವ ಇದ್ಯಾ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.