ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ತೇಜಸ್ವಿ ಸೂರ್ಯ ನಡುವೆ ಟನಲ್ ರಸ್ತೆ ವಿಚಾರವಾಗಿ ಸಮರ ಮುಂದುವರೆದಿದೆ.. ಟನಲ್ ರಸ್ತೆಯಿಂದ ಪರಿಸರಕ್ಕೆ ಹಾನಿ ಎಂದು ತೇಜಸ್ವಿ ಸೂರ್ಯ ವಿರೋಧಿಸಿದ್ದರು. ಆದರೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ತೇಜಸ್ವಿ ಹೇಳಿದಂತೆ ಕೇಳೋಕೆ ಆಗೋದಿಲ್ಲ ಅಂತಾ ಹೇಳಿದ್ದರು.. ಇದೇ ವಿಚಾರಕ್ಕೆ ಸಂಸದ ತೇಜಸ್ವಿ ಸೂರ್ಯ ಅವರು ಸುದ್ದಿಗೋಷ್ಠಿ ನಡೆಸಿ ಡನಲ್ ರಸ್ತೆ ಏಕೆ ಬೇಡ ಅಂತಾ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡಿದ ಸಂಸದ ತೇಜಸ್ವಿ ಸೂರ್ಯ ಅವರು, ಒಂದು ತಿಂಗಳಿನಿಂದ ಟನಲ್ ರೋಡ್ ಬಗ್ಗೆ ಜಿದ್ದಾಜಿದ್ದಿ ನಡೆಯುತ್ತಿದೆ. ಎಲ್ಲರೂ ವಿರೋಧ ಮಾಡಿದರೂ ಕೂಡಾ ಸರ್ಕಾರ ಹಠದಲ್ಲಿ ಮುಂದೆ ಹೋಗುತ್ತಿದೆ. ನಿನ್ನೆ ನಾನು ಡಿಸಿಎಂ ಮುಂದೆ ಒಂದಷ್ಟು ಮಾಹಿತಿಯನ್ನು ಕೊಟ್ಟಿದ್ದೇನೆ. ಪರ್ಯಾಯ ವ್ಯವಸ್ಥೆ ಬಗ್ಗೆ ಸಲಹೆ ಕೊಡಲು ಡಿಸಿಎಂ ಮಾಧ್ಯಮಗಳಲ್ಲಿ ಹೇಳಿದ್ದ ಕಾರಣ ನಾನು ಭೇಟಿ ಮಾಡಿದ್ದೆ. ನಾನು ಕೊಟ್ಟ ಪ್ರಸ್ತಾವನೆಗಳಲ್ಲಿ ಪರ್ಯಾಯ ಪರಿಹಾರ ಕಾಣಲಿಲ್ಲ ಎಂದು ಅವರು ಮಾಧ್ಯಮಗಳಲ್ಲಿ ಹೇಳಿರುವುದು ಗೊತ್ತಾಗಿದೆ ಎಂದರು.
ರಸ್ತೆ ಅಗಲೀಕರಣ, ಹೊಸ ರಸ್ತೆಯಿಂದ ಟ್ರಾಫಿಕ್ ಸಮಸ್ಯೆ ಪರಿಹಾರ ಆಗುತ್ತದೆ ಎಂದು ನಾವು ಅಂದುಕೊಂಡಿದ್ದೇವೆ, ಆದರೆ ಸಾರ್ವಜನಿಕ ಸಾರಿಗೆ, ರಸ್ತೆ ಅಗಲೀಕರಣದಿಂದ ಇದು ಸಾಧ್ಯವಿಲ್ಲ. ನಾವು ವಾಹನಗಳ ಸಂಚಾರ ಬಗ್ಗೆ ಯೋಚಿಸುತ್ತಿದ್ದೇವೆಯೇ ಹೊರತು, ಜನರನ್ನು ಮೂವ್ ಮಾಡುವ ಬಗ್ಗೆ ಯೋಚಿಸುತ್ತಿಲ್ಲ. ಶ್ರೀಮಂತರು ಕೂಡ ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವ ವ್ಯವಸ್ಥೆ ಯಾವ ದೇಶದಲ್ಲಿ ಇದೆಯೋ ಅಲ್ಲಿ ಅಭಿವೃದ್ಧಿ ಇರುತ್ತದೆ. ಕಾರು ಇಲ್ಲದೇ ಇದ್ದರೆ ಹೆಣ್ಣು ಕೊಡಲ್ಲ ಅಂತಾ ಡಿಸಿಎಂ ಹೇಳಿದ್ದಾರೆ. ಇಷ್ಟು ದಿನ ಅವರು ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಟನಲ್ ರೋಡ್ ಮಾಡುತ್ತಿದ್ದಾರೆ ಅಂದುಕೊಂಡಿದ್ದೆ, ಆದರೆ ಈಗ ನೋಡಿದರೆ ಸಾಮಾಜಿಕ ಪಿಡುಗು ನಿವಾರಿಸಲು ರೋಡ್ ಮಾಡುತ್ತಿದ್ದಾರೆ ಅನ್ನಿಸುತ್ತದೆ ಎಂದು ಹೇಳಿದ್ದಾರೆ.
ಟನಲ್ನಲ್ಲಿ ಕಾರು ಆದರೆ ಗಂಟೆಗೆ 1600 ಜನ ಓಡಾಡುತ್ತಾರೆ. ಅಲ್ಲಿ ಮೆಟ್ರೋ ಮಾಡಿದರೆ ಗಂಟೆಗೆ 7, 500 ಸಾವಿರ ಜನ ಓಡಾಡುತ್ತಾರೆ. ಟನಲ್ ರೋಡ್ ಕಾರು ಇರುವವರಿಗೆ ಮಾತ್ರ ಅವಕಾಶ. ಮೆಟ್ರೋ ಆದರೆ ಎಲ್ಲಾ ಸಾರ್ವಜನಿಕರಿಗೂ ಅನೂಕೂಲವಾಗುತ್ತದೆ. ಬೆಂಗಳೂರಿನಲ್ಲಿ ಇಂದು 12% ಜನರ ಬಳಿ ಮಾತ್ರ ಕಾರು ಇದೆ. ಡಿಸಿಎಂ ಸಾರಿಗೆ ಇಲಾಖೆಯಿಂದ ಮಾಹಿತಿ ತರಿಸಿಕೊಳ್ಳಬೇಕು. ಬೆಂಗಳೂರಿನಲ್ಲಿರುವ ಎಲ್ಲರ ಬಳಿ ಕಾರು ಇದೆ ಅಂತಾ ಡಿಸಿಎಂ ಅಂದುಕೊಂಡಿದ್ದಾರೆ, ಹಾಗಾದರೆ ಉಳಿದವರಿಗೆ ಯಾರಿಗೂ ಹೆಣ್ಣು ಕೊಡುತ್ತಿಲ್ವಾ? ಮದುವೆ ಆಗುತ್ತಿಲ್ವಾ? ಅವರು ಯಾರೂ ಸಂಸಾರ ಮಾಡುತ್ತಿಲ್ವಾ? ಡಿಸಿಎಂಗೆ ಯಾರು ಇಂತಹ ಸಲಹೆ ಕೊಡುತ್ತಾರೋ ಎಂದಿದ್ದಾರೆ.
ಡಿಪಿಆರ್ನಲ್ಲೇ ಎಂಟ್ರಿ ಮತ್ತು ಎಕ್ಸಿಟ್ ಗೇಟ್ನಲ್ಲಿ ಟ್ರಾಫಿಕ್ ಸಮಸ್ಯೆ ಆಗುವ ಬಗ್ಗೆ ಉಲ್ಲೇಖ ಆಗಿದೆ. ಟನಲ್ನಲ್ಲಿ ನಾಲ್ಕು ಪಥದಲ್ಲಿ ರಸ್ತೆ ಇರುತ್ತದೆ. ಇದನ್ನು ತಂದು ಎಕ್ಸಿಟ್ನಲ್ಲಿ ದ್ವಿಪಥದ ರಸ್ತೆಗೆ ಬಿಟ್ಟರೆ ಆಗುವ ಸಮಸ್ಯೆಗೆ ಪರಿಹಾರ ಏನು ಅಂತಾ ಸರ್ಕಾರ ಉತ್ತರಿಸಿಲ್ಲ. ಈ ಪ್ರಾಜೆಕ್ಟ್ಗೆ ಪರಿಸರದ ಮೇಲಿನ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ಆಗಿಲ್ಲ. ಯೋಜನೆಗೆ ಮಣ್ಣು ಪರೀಕ್ಷೆ ಮಾಡಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯ ತಜ್ಞರ ಸಮಿತಿಯೇ ಹೇಳಿದೆ. ಟನಲ್ ಒಳಗೆ ಹೋಗಬೇಕಾದರೆ ಜನ ಒಂದೂವರೆ ಕಿ.ಮೀ. ಹೆಚ್ಚುವರಿ ಪ್ರಯಾಣ ಮಾಡಬೇಕು. ನೂರಾರು ಕಿ.ಮೀ. ರೋಡ್ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಪರಿಹಾರ ಆಗದೇ ಇರುವಾಗ, 18 ಕಿ.ಮೀ. ರಸ್ತೆ ಮಾಡಿದರೆ ಟ್ರಾಫಿಕ್ ಪರಿಹಾರವಾಗಿ ಬಿಡುತ್ತದಾ? ಭೂ ವೈಜ್ಞಾನಿಕ ಅಧ್ಯಯನ ಆಗಿಲ್ಲ. ಏಕಾಏಕಿ ಭೂಮಿ ಬಗೆದರೆ ಬೆಂಗಳೂರು ಕಥೆ ಏನು ಎಂದು ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.
ಟನಲ್ ರೋಡ್ಗೆ ಖರ್ಚು ಮಾಡುವ ಹಣವನ್ನು ಬೇರೆ ಬೇರೆ ಮಾದರಿಯಲ್ಲಿ ಖರ್ಚು ಮಾಡಿದರೆ ಮೂರು ವರ್ಷಗಳಲ್ಲಿ ಟ್ರಾಫಿಕ್ ವ್ಯವಸ್ಥೆಗೆ ಪರಿಹಾರ ಮಾಡಬಹುದು. ಒಂದು ಕಾಲು ಗಂಟೆ ನಾನು ಡಿಸಿಎಂಗೆ ವಿವರಣೆ ಕೊಟ್ಟಿದ್ದೇನೆ. ಇಷ್ಟು ಆದ ಮೇಲೂ ಅವರಿಗೆ ಯಾವುದೂ ಪರ್ಯಾಯ ಅಲ್ಲ ಅಂತಾ ಅವರಿಗೆ ಅನ್ನಿಸಿದರೆ ಇನ್ನು ಯಾವ ಪರ್ಯಾಯ ಇದೆ ಅಂತಾ ನನಗೆ ಗೊತ್ತಾಗುತ್ತಿಲ್ಲ. ನಾನು ಮೂರು ದಿನ ಹಗಲು ರಾತ್ರಿ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದೇನೆ. ತಜ್ಞರು, ಎಲ್ಲರ ಬಳಿಯೂ ಚರ್ಚೆ ಮಾಡಿ ಈ ಪ್ರಸ್ತಾವನೆ ಸಿದ್ಧಪಡಿಸಿದ್ದೇನೆ. ನಾವು ಬೆಂಗಳೂರಿನ ಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತುತ್ತೇವೆ. ಏಕೆ ಸರ್ಕಾರ ಟನಲ್ ಯೋಜನೆಯನ್ನೇ ಹಠ ಹಿಡಿದಿದೆ ಎಂದು ಜನರಿಗೆ ಅರ್ಥ ಆಗಬೇಕು. ಇಂದು ಹೆಣ್ಣು ಕೊಡಲ್ಲ ಎಂಬ ಕಾರಣ ಕೊಟ್ಟಿದ್ದಾರೆ, ನಾಳೆ ಇನ್ಯಾವ ಕಾರಣ ಬರುತ್ತದೋ ಗೊತ್ತಿಲ್ಲ. ರಾಜಕಾರಣದಲ್ಲಿ ಜನರೇ ದೇವರು ಎಂದು ಹೇಳಿದ್ದಾರೆ.
ಟನಲ್ ಯೋಜನೆ ನಿಲ್ಲಿಸಲು ನಾವು ಅಧಿಕಾರಕ್ಕೆ ಬರಬೇಕು ಅಂತಾ ಇಲ್ಲ. ನಾವು ಅಧಿಕಾರಕ್ಕೆ ಬರುವ ಮೊದಲೇ ಯೋಜನೆಯನ್ನು ನಿಲ್ಲಿಸುತ್ತೇವೆ. ಟನಲ್ ಯೋಜನೆ ಬೆಂಗಳೂರು ವಿರೋಧಿ. ಇದರ ವಿರುದ್ಧ ನಾವು ಜನಾಂದೋಲನ ಸೃಷ್ಟಿಸುತ್ತೇವೆ. ಭೂವೈಜ್ಞಾನಿಕ ಪರಿಣಾಮದ ಸರ್ವೇ ಬಗ್ಗೆ ಕೇಂದ್ರ ಸಚಿವ ಕಿಶನ್ ರೆಡ್ಡಿಗೆ ಬರೆದ ಪತ್ರಕ್ಕೆ ಪ್ರತಿಕ್ರಿಯೆ ಬಂದಿದೆ. ಪುರಾತತ್ವ ಇಲಾಖೆಯವರು ಕೂಡ ವರದಿ ಸಲ್ಲಿಸುತ್ತಾರೆ ಎಂದು ಸಂಸದ ತೇಜಸ್ವಿಸೂರ್ಯ ಹೇಳಿದ್ದಾರೆ.


