Top Newsರಾಜ್ಯ

ರೇಣುಕಾಸ್ವಾಮಿ ಮನೆಯಲ್ಲಿ ಕಣ್ಣೀರು – ದರ್ಶನ್ ಯೂರೋಪ್ ಟ್ರಿಪ್!

ಚಿತ್ರದುರ್ಗದ ಕೆ.ಎಸ್. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಇಂದಿಗೆ 1 ವರ್ಷ. ಇನ್ನೂ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಲೇ ಇದೆ. ಆರೋಪಿಗಳೆಲ್ಲಾ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಆದರೆ, ಮೃತ ರೇಣುಕಾಸ್ವಾಮಿ ಮನೆಯಲ್ಲಿ ಕಣ್ಣೀರು ಮಾತ್ರ ನಿಂತಿಲ್ಲ. ವರ್ಷದ ತಿಥಿ ಕಾರ್ಯ ಹಿನ್ನೆಲೆ ರೇಣುಕಾಸ್ವಾಮಿ ಭಾವಚಿತ್ರಕ್ಕೆ ಪೋಷಕರು, ಪತ್ನಿ-ಪುತ್ರ ಪೂಜೆ ಮಾಡಿದ್ರು.

ಮಗನ ಸಾವಿನ ವಿಚಾರವಾಗಿ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಮಾತನಾಡಿದ್ದಾರೆ. ದರ್ಶನ್ ಪ್ರಕರಣ ಸಂಬಂಧ ನಾವು ಮೌನ ವಹಿಸಿಲ್ಲ. ಕಾನೂನಿಗೆ ಗೌರವ ಕೊಡುತ್ತೇವೆ. ನ್ಯಾಯ ಸಿಗುವ ಭರವಸೆ ಇದೆ. ದರ್ಶನ್ ರಿಲೀಸ್ ಆದ್ಮೇಲೆ ನಮ್ಮನ್ನು ಸಂಪರ್ಕಿಸಿಲ್ಲ. ದರ್ಶನ್ ನಮ್ಮನ್ನು ಸಂಪರ್ಕಿಸ್ತಾರೆ ಎಂಬ ನಂಬಿಕೆಯೂ ಇಲ್ಲ. ನಮ್ಮ ಜೀವ ಇರೋವರೆಗೆ ಆ ನೋವು ಇದ್ದೇ ಇರುತ್ತೆ. ನಮ್ಮ ಮೊಮ್ಮಗನನ್ನು ನೋಡಿಕೊಂಡು ನೋವು ಮರೆಯುತ್ತಿದ್ದೇವೆ. ಕೋರ್ಟ್ ಕೇಸ್ ಯಾವಾಗ ಮುಗಿಯುತ್ತೋ ಗೊತ್ತಿಲ್ಲ. ನಮಗೇನೋ ವಯಸ್ಸಾಯ್ತು. ಅವರು ಇನ್ನೂ ಬಾಳಿ ಬದುಕಬೇಕಾದವರು. ಆದಷ್ಟು ಕೋರ್ಟ್ ಕೇಸ್ ಮುಗಿದು, ಸರ್ಕಾರ ನನ್ನ ಸೊಸೆ, ಮೊಮ್ಮಗನ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕಿದೆ. ಸರ್ಕಾರ ಮಾನವೀಯ ದೃಷ್ಟಿಯಿಂದ ಪರಿಶೀಲಿಸಬೇಕಿದೆ ಎಂದರು.

ಇನ್ನು, ರೇಣುಕಾಸ್ವಾಮಿ ಪತ್ನಿ ಕೂಡ ಸರ್ಕಾರದ ನೆರವಿಗಾಗಿ ಮನವಿ ಮಾಡಿದರು. ನಮ್ಮ ಅತ್ತೆ ಮಾವನವರಿಗೆ ವಯಸ್ಸಾಗಿದೆ. ನನಗೆ, ನನ್ನ ಮಗನ ಭವಿಷ್ಯಕ್ಕಾಗಿ ಸರ್ಕಾರದ ಸಹಾಯಬೇಕಿದೆ ಅಂತಾ ರೇಣುಕಾಸ್ವಾಮಿ ಪತ್ನಿ ಮನವಿ ಮಾಡಿದ್ದಾರೆ. ಇನ್ನು, ಮೃತ ರೇಣುಕಾಸ್ವಾಮಿ ತಂದೆ ಕೂಡ, ಸರ್ಕಾರದ ನೆರವಿಗಾಗಿ ಒತ್ತಾಯಿಸಿದರು.

ಮೆಡಿಕಲ್​ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಗೆಳತಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ. ಈ ವಿಚಾರ ತಿಳಿದ ದರ್ಶನ್ ಗ್ಯಾಂಗ್, ರೇಣುಕಾಸ್ವಾಮಿಯನ್ನು ಅಪಹರಿಸಿದ್ರು. ಬಳಿಕ ಶೆಡ್ ವೊಂದರಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ರು. ವಿಷಯ ಗೊತ್ತಾಗ್ತಿದ್ದಂತೆ ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದ ನಟ ದರ್ಶನ್, ಮನಸೋಇಚ್ಛೆ ಥಳಿಸಿದ್ರು. ಬಳಿಕ ಪವಿತ್ರಾ ಗೌಡ ಕೈಯ್ಯಿಂದ ಚಪ್ಪಲಿಯಿಂದಲೂ ಹೊಡೆಸಿದ್ರು. ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾಸ್ವಾಮಿ,2024ರ ಜೂನ್ 7ರಂದು ಮೃತಪಟ್ಟಿದ್ರು. ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರೋದಾಗಿ, ಮರಣೋತ್ತರ ವರದಿಯಲ್ಲೂ ಸಾಬೀತಾಗಿತ್ತು.

ಜೂನ್ 8ರಂದು ರೇಣುಕಾಸ್ವಾಮಿ ಶವ ಸುಮ್ಮನಹಳ್ಳಿ ಸೇತುವೆ ಬಳಿ ಪತ್ತೆಯಾಗಿತ್ತು. ಜೂನ್ 9ರಂದು ದರ್ಶನ್ ಮತ್ತು ಪವಿತ್ರಾ ಗೌಡರನ್ನು, ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ರು. ಜೂನ್ 20ರಂದು ದರ್ಶನ್​​ರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಕೈದಿ ಸಂಖ್ಯೆ 6106 ಕೊಡಲಾಗಿತ್ತು. ವರ್ಷ ಕಳೆದರೂ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಆಗಿಲ್ಲ. ಮೃತ ರೇಣುಕಾಸ್ವಾಮಿ ಸಂತ್ರಸ್ತರಿಗೆ ಸರ್ಕಾರದಿಂದಲಾಗಿ, ದರ್ಶನ್​ ಕಡೆಯಿಂದಾಗಲಿ ಯಾವುದೇ ನೆರವು ಸಿಕ್ಕಿಲ್ಲ.

Comments (0)

Your email address will not be published. Required fields are marked *

Back to top button