ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತೆ ಸುಂಕಾಸ್ತ್ರ ಮುಂದುವರಿದಿದೆ.. ಆಮದು ಸರಕುಗಳು, ಔಷಧ ಉತ್ಪನ್ನಗಳ ಮೇಲೆ ಹಲವು ಸುಂಕ ಹೆಚ್ಚಳ ಮಾಡಿದ್ದು, ಇದೀಗ ವಿದೇಶಗಳ ಸಿನಿಮಾಗಳ ಮೇಲೆ ಶೇ.100 ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಅಮೆರಿಕಾ ತಮ್ಮ ದೇಶದ ಹೊರಗೆ ತಯಾರಾಗುವ ಎಲ್ಲಾ ಚಲನಚಿತ್ರಗಳ ಮೇಲೆ 100% ಸುಂಕವನ್ನು ವಿಧಿಸುತ್ತದೆ ಎಂದು ಟ್ರಂಪ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. ನಮ್ಮ ದೇಶದಲ್ಲಿ ಬೇರೆ ದೇಶಗಳ ಚಲನಚಿತ್ರಗಳು ಅಪಾರ ಲಾಭ ಗಳಿಸುತ್ತಿವೆ. ಅಮೆರಿಕನ್ ಚಿತ್ರೋದ್ಯಮವನ್ನು ವಿದೇಶಿ ಉದ್ಯಮಗಳು ಮಗುವಿನ ಕೈಯಲ್ಲಿರುವ ಕ್ಯಾಂಡಿಯನ್ನು ಕದ್ದು ತಿನ್ನುವಂತೆ ಹೈಜಾಕ್ ಮಾಡುತ್ತಿವೆ. ನಮ್ಮ ಉದ್ಯಮವನ್ನು ರಕ್ಷಿಸಲು, ಅಮೆರಿಕದ ಹೊರಗಡೆ ತಯಾರಾಗುವ ಸಿನಿಮಾಗಳ ಮೇಲೆ 100% ತೆರಿಗೆ ವಿಧಿಸುತ್ತೇವೆ ಎಂದು ಅವರು ಬರೆದಿದ್ದಾರೆ.
ಅಮೆರಿಕದ ಸಿನಿಮಾ ಮಾರುಕಟ್ಟೆಯು ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಪ್ರತಿ ವರ್ಷ ಸಾವಿರಾರು ಕೋಟಿ ಡಾಲರ್‌ಗಳ ವ್ಯವಹಾರ ನಡೆಯುತ್ತದೆ. ಹಾಲಿವುಡ್ ಚಿತ್ರಗಳು ಜಾಗತಿಕವಾಗಿ ಪ್ರಾಬಲ್ಯ ಹೊಂದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಸಿನಿಮಾಗಳು, ವಿಶೇಷವಾಗಿ ಭಾರತೀಯ, ಚೈನೀಸ್ ಮತ್ತು ಕೊರಿಯನ್ ಚಿತ್ರಗಳು ಅಮೆರಿಕದಲ್ಲಿ ಜನಪ್ರಿಯತೆ ಗಳಿಸಿವೆ.
ಈ ತೆರಿಗೆ ಹೆಚ್ಚಳದಿಂದ ಸಿನಿಮಾ ಟಿಕೆಟ್ ದರಗಳು ದುಪ್ಪಟ್ಟಾಗಲಿದ್ದು, ವಿತರಣಾ ವೆಚ್ಚಗಳು ಹೆಚ್ಚಲಿವೆ. ಅಮೆರಿಕದಲ್ಲಿ ದೊಡ್ಡ ಮಾರುಕಟ್ಟೆ ಹೊಂದಿರುವ ಭಾರತೀಯ ಸಿನಿಮಾಗಳಿಗೆ ಇದು ದೊಡ್ಡ ಹೊಡೆತವಾಗಲಿದೆ.


