ಫ್ರೀಡಂ ಟಿವಿ ಸಾಧನೆಯ ಹಾದಿ – ಸಾರ್ಥಕ ಒಂದು ವರ್ಷ

ಫ್ರೀಡಂ ಟಿವಿ… ಇದು ಕನ್ನಡ ನಾಡಿನ ಜನ ಸಾಮಾನ್ಯರ ಶಕ್ತಿ. ಬೆಂಗಳೂರಿನ ಶ್ರೀಮಂತ ಬಡಾವಣೆ ಸದಾಶಿವನಗರದಲ್ಲಿದ್ದರೂ ಕಟ್ಟ ಕಡೆಯ ಕಾಮನ್ ಮ್ಯಾನ್ ಪರ ಕೆಲಸ ಮಾಡುವ ಏಕೈಕ ನ್ಯೂಸ್ ಚಾನೆಲ್. ಅಧಿಕಾರಸ್ಥರಿಂದ ಟೇಪ್ ಕಟ್ ಮಾಡಿಸಿ ಕೊಳ್ಳಲು ಹವಣಿಸುವವರ ಮಧ್ಯೆ ರೈತ, ಕಾರ್ಮಿಕ, ಚಾಲಕ ಹಾಗು ಪೌರ ಕಾರ್ಮಿಕ ಮಹಿಳೆಯಿಂದ ಲೋಕಾರ್ಪಣೆಗೊಂದಿದ್ದ ಹೆಮ್ಮೆಯ ವಾಹಿನಿ. ಕನ್ನಡಿಗರ ಸ್ವಾಭಿಮಾನದ ನಿಮ್ಮ ಫ್ರೀಡಂ ಟಿವಿಗೆ ಇದೀಗ ವರ್ಷದ ಹರ್ಷ. ಜನ ಸಾಮಾನ್ಯರೇ ಲೋಕಾರ್ಪಣೆಗೊಳಿಸಿದ್ದ ನಿಮ್ಮ ಮೆಚ್ಚಿನ ವಾಹಿನಿ ಒಂದು ವರ್ಷ ಪೂರ್ಣಗೊಳಿಸಿ ಎರಡನೇ ವರ್ಷಕ್ಕೆ ಹೆಜ್ಜೆ ಇಟ್ಟಿದೆ.
ಸುದ್ದಿ ಪ್ರಸಾರದ ವಿಚಾರದಲ್ಲಿ ನಿಮ್ಮ ಫ್ರೀಡಂ ಟಿವಿಯದ್ದು ಯಾರಿಗೂ ಕೇರ್ ಮಾಡದ ದಿಟ್ಟ ನಡೆ.. ವಿಧಾನಸೌಧದ ಮೊಗಸಾಲೆಯಿಂದ ಹಿಡಿದು ನಿಮ್ಮೂರಿನ ಪಂಚಾಯ್ತಿ ಪಡಸಾಲೆವರೆಗೆ ಎಲ್ಲ ಸುದ್ದಿಗಳನ್ನ ಯಾವುದೇ ಅಡ್ಡಿ ಇಲ್ಲದೆ ನಿಮಗೆ ತಲುಪಿಸಿದೆ. ಈ ಹಾದಿಯಲ್ಲಿ ರಾಕ್ಷಸ ಶಕ್ತಿ ಉಳ್ಳವರನ್ನ, ನಿರ್ದಯಿ ಕಟುಕರನ್ನ, ಅಧಿಕಾರಸ್ಥ ರಾಜಕಾರಣಿಗಳನ್ನ ಎದುರು ಹಾಕಿಕೊಂಡಿದೆ. ಸುಳ್ಳು ಕೇಸ್ ಗಳನ್ನು ಮೈಮೇಲೆ ಎಳೆದುಕೊಂಡಿದೆ. ಹಲವು ಹಗರಣಗಳನ್ನ ಬಯಲಿಗೆಳೆದಿದೆ. ಎಲ್ಲೂ ಸಿಗದ ಎಕ್ಸ್ ಕ್ಲೂಸಿವ್ ಸುದ್ದಿಗಳನ್ನ ಪ್ರಸಾರ ಮಾಡಿದೆ. ಸುಭಗರ ಮುಖವಾಡ ಕಳಚಿದೆ. ಹೂತು ಹೋದ ಸತ್ಯಗಳನ್ನು ಹೆಕ್ಕಿ ಹೊರತೆಗೆದಿದೆ. ಅಸಹಾಯಕ ಜನರ ನೋವಿಗೆ ಮಿಡಿದಿದೆ.
ಫ್ರೀಡಂ ವಾಹಿನಿಯ ಒಂದೊಂದು ಸುದ್ದಿಯೂ ಬಾಣದಷ್ಟು ತೀಕ್ಷ್ಣ.. ಜನಸಾಮಾನ್ಯರ ಭಾಷೆಯಲ್ಲಿ ಸತ್ಯವನ್ನು ನೇರ ಹಾಗು ನಿಷ್ಠುರವಾಗಿ ಹೇಳುವುದು ನಮ್ಮ ಹುಟ್ಟು ಗುಣ.. ನಿಮ್ಮ ಫ್ರೀಡಂ ಟಿವಿಯ ಸಣ್ಣ ಸಣ್ಣ ಪೋಸ್ಟರ್ ಗಳೇ ಘಟಾನುಘಟಿಗಳ ತೊಡೆ ನಡುಗಿಸಿವೆ. ನಮ್ಮ ವರದಿಗಳಿಂದ ಮಂತ್ರಿಗಳು ನಡುಗಿದ್ದಾರೆ. ಎಮ್ಮೆಲ್ಲೆ ಗಳು ಬೆದರಿದ್ದಾರೆ. IAS ಗಳು ಸುಸ್ತಾಗಿದ್ದಾರೆ. KAS ಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ಹಣ ಬಲ, ತೋಳ್ಬಲ, ಜಾತಿ ಬಲದ ಗರ್ವದಲ್ಲಿಮೆರೆಯುವ ದೈತ್ಯ ಶಕ್ತಿಗಳ ಎದುರು ನಿಮ್ಮ ಫ್ರೀಡಂ ಟಿವಿ ಹುಲಿಗೂ ಸೋಲದ ಹನಿ ಬ್ಯಾಡ್ಜರ್ನಂತೆ ದಿಟ್ಟವಾಗಿ ನಿಂತಿದೆ.. ಅಧಿಕಾರಸ್ಥ ರಾಜಕಾರಣಿಗಳ ರಕ್ಕಸ ಕ್ರೌರ್ಯದೆದುರು ನಿಮ್ಮ ಫ್ರೀಡಂ ಟಿವಿ ಸೆಣೆಸಿ ಒಂದು ವರ್ಷ ಪೂರೈಸಿದೆ. ಒಂದು ವರ್ಷದ ಈ ಅನುಭವದ ಮೂಸೆಯಲ್ಲಿ ನಿಮ್ಮ ಫ್ರೀಡಂ ಟಿವಿ ತಂಡ ಮತ್ತಷ್ಟು ಹುರುಪಿಂದ ಕನ್ನಡಿಗರ ಸೇವೆಗೆ ಅಣಿಯಾಗಿ ನಿಂತಿದೆ.. ಜಾತಿ ಧರ್ಮ ಹಣ, ಅಧಿಕಾರ ಯಾವುದೂ ಇಲ್ಲದ ಜನಸಾಮಾನ್ಯನಿಗೆ ಮಾಹಿತಿ ಶಕ್ತಿ ನೀಡುವ ಕೆಲಸವನ್ನ ನಾವು ಮತ್ತಷ್ಟು ಹುರುಪಿನಿಂದ ಮಾಡಲಿದ್ದೇವೆ.
ಭವ್ಯ ಭಾರತದ, ಜನಮೆಚ್ಚಿದ ಪ್ರಜಾತಂತ್ರದ ಹೆಮ್ಮರದಲ್ಲಿ ಪುಟ್ಟ ಗೂಡು ಕಟ್ಟಿರುವ ಫ್ರೀಡಂ ಟಿವಿ ಬಳಗವು ನಿಮ್ಮೆಲ್ಲರ ಸಲಹೆ ಸೂಚನೆಗಳನ್ನು ಶಿರಸ್ಸಾವಹಿಸಿ ಸ್ವೀಕರಿಸಲಿದೆ. ಸಮಸ್ತ ಕನ್ನಡಿಗರ ಪ್ರೀತಿಯೊಂದನ್ನ ಬಿಟ್ಟು ಬೇರೇನನ್ನೂ ಫ್ರೀಡಂ ಟಿವಿ ನಿರೀಕ್ಷಿಸುವುದಿಲ್ಲ.. ನೀವು ನಮ್ಮ ಮೇಲಿಡುವ ಭರವಸೆಯನ್ನ ನಾವೆಂದೂ ಹುಸಿಮಾಡುವುದಿಲ್ಲ..ಯಾಕಂದ್ರೆ, ಫ್ರೀಡಂ ಟಿವಿ.. ಇದು ಜನಸಾಮಾನ್ಯರ ಶಕ್ತಿ..




