Wednesday, April 30, 2025
35.6 C
Bengaluru
LIVE
ಮನೆಕ್ರಿಕೆಟ್ಅಫ್ಘಾನ್‌ ವಿರುದ್ಧ ಭಾರತಕ್ಕೆ 47 ರನ್‌ಗಳ ಸೂಪರ್‌ ಜಯ – ಹಿಟ್‌ಮ್ಯಾನ್‌ ವಿಶೇಷ ಸಾಧನೆ!

ಅಫ್ಘಾನ್‌ ವಿರುದ್ಧ ಭಾರತಕ್ಕೆ 47 ರನ್‌ಗಳ ಸೂಪರ್‌ ಜಯ – ಹಿಟ್‌ಮ್ಯಾನ್‌ ವಿಶೇಷ ಸಾಧನೆ!

ಬಾರ್ಬಡೋಸ್‌: ಸೂರ್ಯಕುಮಾರ್‌ ಯಾದವ್  ಸ್ಫೋಟಕ ಅರ್ಧಶತಕ, ಜಸ್‌ಪ್ರೀತ್‌ ಬುಮ್ರಾ ಮಾರಕ ಬೌಲಿಂಗ್ ದಾಳಿ ನೆರವಿನಿಂದ ಭಾರತ, 2024ರ ಐಸಿಸಿ ಟಿ20 ವಿಶ್ವಕಪ್‌  ಟೂರ್ನಿಯ ಸೂಪರ್‌-8ರ ಸುತ್ತಿನಲ್ಲಿ ಅಫ್ಘಾನಿಸ್ತಾನದ ವಿರುದ್ಧ 47 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಅಂತಿಮ 8ರ ಘಟ್ಟದಲ್ಲಿ ಟೀಂ ಇಂಡಿಯಾ ಶುಭಾರಂಭ ಕಂಡಿದೆ.

ಈ ಗೆಲುವಿನೊಂದಿಗೆ ನಾಯಕ ರೋಹಿತ್‌ ಶರ್ಮಾ ಅವರ ಹೆಗಲಿಗೆ ಮತ್ತೊಂದು ವಿಶೇಷ ಸಾಧನೆಯೂ ಸೇರ್ಪಡೆಯಾಗಿದೆ. ನಿಯಮಿತ ಓವರ್‌ಗಳ ಐಸಿಸಿ ಪಂದ್ಯಗಳಲ್ಲಿ ಅತಿಹೆಚ್ಚು ಗೆಲುವು ಸಾಧಿಸಿದ ಟೀಂ ಇಂಡಿಯಾ ನಾಯಕ ಸಹ ಎನಿಸಿಕೊಂಡಿದ್ದಾರೆ. 21 ಪಂದ್ಯಗಳ ಪೈಕಿ ರೋಹಿತ್‌ ನಾಯಕತ್ವದಲ್ಲಿ ಭಾರತ 18ರಲ್ಲಿ ಗೆಲುವು ಸಾಧಿಸಿದ್ದು, ಕೇವಲ 3 ಪಂದ್ಯಗಳಲ್ಲಿ ಸೋಲು ಕಂಡಿದೆ.

ಗುರುವಾರ ಇಲ್ಲಿನ ಬಾರ್ಬಡೋಸ್‌ನ ಕೆನ್ಸಿಂಗ್ಟನ್‌ ಓವಲ್ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 182 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ, ಬುಮ್ರಾ ಹಾಗೂ ಅರ್ಷ್‌ದೀಪ್‌ ಸಿಂಗ್‌ ಮಾರಕ ಬೌಲಿಂಗ್‌ ದಾಳಿಗೆ ನಲುಗಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಆ ಮೂಲಕ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 134 ರನ್‌ಗಳಿಗೆ ಆಲ್‌ಔಟ್‌ ಆಯಿತು.

 

ಚೇಸಿಂಗ್‌ ಆರಂಭಿಸಿದ ಅಫ್ಘಾನ್‌ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಅಝಮತ್‌ವುಲ್ಲಾ ಒಮರ್ಜಾಯ್‌ (26 ರನ್‌) ಅವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ ವೈಯಕ್ತಿಕ 20 ರನ್‌ಗಳ ಗಡಿಯನ್ನು ದಾಟುವಲ್ಲಿ ವಿಫಲರಾದರು. ರಹಮಾನುಲ್ಲಾ ಗುರ್ಬಝ್‌ (11 ರನ್‌), ಹಝಮತ್‌ವುಲ್ಲಾ ಝಝೈ (2 ರನ್‌), ಇಬ್ರಾಹಿಂ ಝರ್ಡಾನ್‌ (8 ರನ್‌) ವಿಫಲರಾದರು. ಇನ್ನು ಮಧ್ಯಮ ಕ್ರಮಾಕದಲ್ಲಿ ಗುಲ್ಬದ್ದಿನ್‌ ನೈಬ್ (17 ರನ್‌), ನಝಿಬುಲ್ಲಾ ಝರ್ಡಾನ್ (19 ರನ್‌) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಂತು ಆಡಲಿಲ್ಲ. ಈಗಾಗಿ ಅಫ್ಘಾನ್‌ ತಂಡ ಸೋಲು ಕಂಡಿತು.

ಭಾರತದ ಪರ ಮಾರಕ ದಾಳಿ ನಡೆಸಿದ ಜಸ್‌ಪ್ರೀತ್‌ ಬುಮ್ರಾ 4 ಓವರ್‌ಗಳಿಗೆ ಕೇವಲ 7 ರನ್‌ ನೀಡಿ ಪ್ರಮುಖ 3 ವಿಕೆಟ್‌ಗಳನ್ನು ಕಬಳಿಸಿದರು. ಅರ್ಷದೀಪ್ ಸಿಂಗ್‌ 4 ಓವರ್‌ಗಳಿಗೆ 36 ರನ್‌ ನೀಡಿ 3 ವಿಕೆಟ್‌ಗಳನ್ನು ಪಡೆದರು.

 

181 ರನ್‌ಗಳನ್ನು ಕಲೆ ಹಾಕಿದ ಭಾರತ

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ, 20 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 181 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಅಫ್ಘಾನಿಸ್ತಾನ ತಂಡಕ್ಕೆ 182 ರನ್‌ಗಳ ಗುರಿ ನೀಡಿತ್ತು. ಭಾರತದ ಪರ ಸೂರ್ಯಕುಮಾರ್‌ 53 ರನ್‌, ಹಾರ್ದಿಕ್‌ ಪಾಂಡ್ಯ 32 ರನ್‌ ಗಳಿಸಿದ್ದರು.

ಎಂದಿನಂತೆ ಭಾರತದ ಪರ ಇನಿಂಗ್ಸ್ ಆರಂಭಿಸಿದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಮತ್ತೆ ವೈಫಲ್ಯ ಅನುಭವಿಸಿದರು. ರೋಹಿತ್ ಶರ್ಮಾ 8 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, 24 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದ ವಿರಾಟ್‌ ಕೊಹ್ಲಿ, ರಶೀದ್‌ ಖಾನ್‌ ಎಸೆತದಲ್ಲಿ ಬೌಂಡರಿ ಲೈನ್‌ ಕ್ಯಾಚ್‌ ನೀಡಿ ಔಟ್‌ ಆದರು. ನಂತರ 20 ರನ್‌ ಗಳಿಸಿದ್ದ ರಿಷಭ್‌ ಪಂತ್ ಕೂಡ ರಶೀದ್‌ ಖಾನ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments