ಬೆಂಗಳೂರು : ಧರ್ಮಸ್ಥಳ ಪ್ರಕರಣ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕರ್ನಾಟಕ ಸ್ವಾಮೀಜಿಗಳು ಭೇಟಿಯಾಗಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಮಾಸ್ಕ್ಮ್ಯಾನ್ ಚಿನ್ನಯ್ಯ ಮಾಡಿರುವ ಆರೋಪ ಸಂಬಂಧಿತ ಎಲ್ಲ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕೆಂಬ ಆಗ್ರಹ ಹೆಚ್ಚಾದ ಬೆನ್ನಲ್ಲೇ, ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದ ಸನಾತನ ಸಂತ ನಿಯೋಗ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಎನ್ಐಎ ತನಿಖೆಗೆ ವಹಿಸುವಂತೆ ಮನವಿ ಸಲ್ಲಿಸಿತು.
ಗೃಹ ಸಚಿವ ಅಮಿತ್ ಶಾ ರ ದೆಹಲಿ ಕಚೇರಿಯಲ್ಲಿ ಭೇಟಿಯಾದ ಸ್ವಾಮೀಜಿಗಳು, ಧರ್ಮಸ್ಥಳ ಪ್ರಕರಣ ಕುರಿತು ಗೃಹ ಸಚಿವರ ಜೊತೆಗೆ ಸುದೀರ್ಘ ಚರ್ಚೆ ನಡೆಸಿದರು. ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಕುರಿತು ಮಾಹಿತಿ ನೀಡಿದರು.
ಧರ್ಮಸ್ಥಳ ಪ್ರಕರಣದ ಬೆಳವಣಿಗೆಗಳನ್ನು ನಾನೇ ಖುದ್ದಾಗಿ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಈ ಬಗ್ಗೆ ಸಚಿವ ಸಂಪುಟ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕದ ಸ್ವಾಮೀಜಿಗಳ ನಿಯೋಗಕ್ಕೆ ಮಹತ್ವದ ಭರವಸೆ ನೀಡಿದ್ದಾರೆ.