ಬಾಗಲಕೋಟೆ: ಖಾಸಗಿ ಪಿಜಿಯಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿ ನಡೆದಿದೆ.
17 ವರ್ಷದ ಸೀಮಾ ರಾಠೋಡ ಮೃತ ಯುವತಿ. ಜಿಲ್ಲೆಯ ಬೀಳಗಿ ತಾಲ್ಲೂಕಿನ ಸುನಗ ತಾಂಡಾದ ನಿವಾಸಿಯಾಗಿರುವ ಸೀಮಾ ರಾಠೋಡ, ಬಾಗಲಕೋಟೆ ವಾಗ್ದೇವಿ ಪಿಯು ಕಾಲೇಜ್ ಪ್ರಥಮ ವರ್ಷದ ಸೈನ್ಸ್ ಓದುತ್ತಿದ್ದಳು. ನಿನ್ನೆ ಊರಿನಲ್ಲಿ ಜಾತ್ರೆ ಮುಗಿಸಿಕೊಂಡು ವಾಪಸ್ ಪಿಜಿ ಬಂದಿದ್ದು, ನೇಣುಬಿಗಿದ ಸ್ಥಿತಿಯಲ್ಲಿ ಸೀಮಾ ಶವ ಪತ್ತೆಯಾಗಿದೆ. ಕೂಡಲೇ ಆಕೆಯನ್ನು ರಕ್ಷಣೆ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಆಕೆ ಬದುಕುಳಿಯಲಿಲ್ಲ. ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ಯುವತಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಯನ್ನು ಹಾಸ್ಟೆಲ್ ಸಿಬ್ಬಂದಿ ಸೀಮಾ ತಾಯಿ ಶಕುಂತಲಾಗೆ ಫೋನ್ ಮಾಡಿ ನಿಮ್ಮ ಮಗಳಿಗೆ ಫಿಟ್ಸ್ ಬಂದಿದೆ ಎಂದು ತಿಳಿಸಿದ್ದಾರೆ. ಆದರೆ ಸೀಮಾ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಕುಟುಂಬಸ್ಥರಿಗೆ ಅನುಮಾನ ಹುಟ್ಟಲು ಕಾರಣವಾಗಿದೆ. ಸೀಮಾ ತಾಯಿ ಬಾಗಲಕೋಟೆ ನವನಗರ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಪ್ರಕರಣ ಕುರಿತು ಪ್ರಾಥಮಿಕ ಹಂತದ ತನಿಖೆ ನಡೆಯುತ್ತಿದ್ದು, ಡಿಡಿಪಿಯು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹ ಕಾಲೇಜು ಹಾಗೂ ಹಾಸ್ಟೆಲ್ ಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.


