ಬಾಗಲಕೋಟೆ:ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಹಿನ್ನೆಲೆಯಲ್ಲಿ, ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಖಾನಾಪುರ ಎಸ್ಕೆ ಗ್ರಾಮದಲ್ಲಿ ನಡೆದಿದೆ.
ಖಾನಾಪುರ ಎಸ್ಕೆ ಗ್ರಾಮದ ನಿವಾಸಿ ಸೋಮಶೇಖರ್ ಕಿಳ್ಳಿಕೇತರ (45) ಕೊಲೆಯಾದ ವ್ಯಕ್ತಿ. ಕಾಕನೂರು ಗ್ರಾಮದ ಸಂಜೀವ್ ಕಿಳ್ಳಿಕೇತರ (28) ಎಂಬುವವನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಇವರಿಬ್ಬರೂ ಆಪ್ತ ಸ್ನೇಹಿತರಾಗಿದ್ದು, ಸಂಜೀವ್ ಪತ್ನಿಯೊಂದಿಗೆ ಸೋಮಶೇಖರ್ ಅತಿಯಾದ ಸಲುಗೆ ಹೊಂದಿದ್ದ ಹಾಗೂ ನಿರಂತರವಾಗಿ ಫೋನ್ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಈ ಸಂಬಂಧದ ಬಗ್ಗೆ ಸಂಜೀವ್ಗೆ ತೀವ್ರ ಅನುಮಾನವಿತ್ತು. ಹಲವು ಬಾರಿ ಎಚ್ಚರಿಕೆ ನೀಡಿ ಜೀವ ಬೆದರಿಕೆ ಹಾಕಿದ್ದರೂ ಸೋಮಶೇಖರ್ ಅದನ್ನು ನಿರ್ಲಕ್ಷಿಸಿದ್ದೇ ಪ್ರಾಣಕ್ಕೆ ಮುಳುವಾಗಿದೆ.
ಹತ್ಯೆಯ ಸಂಚು ರೂಪಿಸಿದ್ದ ಸಂಜೀವ್, ಭಾನುವಾರ ಮಧ್ಯಾಹ್ನ ಸೋಮಶೇಖರ್ನನ್ನು ಮಾವಿನ ತೋಟಕ್ಕೆ ಮದ್ಯಪಾನ ಮಾಡಲು ಕರೆದೊಯ್ದಿದ್ದಾನೆ. ಅಲ್ಲಿ ಸೋಮಶೇಖರ್ಗೆ ಕಂಠಪೂರ್ತಿ ಮದ್ಯ ಕುಡಿಸಿ, ಆತ ಪೂರ್ತಿ ನಶೆಯಲ್ಲಿದ್ದಾಗ ಕಲ್ಲಿನಿಂದ ತಲೆ ಮತ್ತು ಮುಖವನ್ನು ಜಜ್ಜಿ ಅಮಾನುಷವಾಗಿ ಕೊಂದಿದ್ದಾನೆ.
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯೆಲ್ ಮತ್ತು ಬಾದಾಮಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಕುಟುಂಬಸ್ಥರು ಸ್ಥಳದಲ್ಲೇ ಕಣ್ಣೀರಿಟ್ಟಿದ್ದು, ಆರೋಪಿ ಸಂಜೀವ್ನನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


