#Exclusive NewsTop Newsಧರ್ಮಫ್ರೀಡಂ ಟಿವಿ ವಿಶೇಷವಿಶೇಷವೆಬ್ ಸ್ಟೋರೀಸ್ಸುದ್ದಿ

Sambhal mosque survey: ಸಂಭಾಲ್​ನ ಜಾಮಾ ಮಸೀದಿ ಸಮೀಕ್ಷೆಗೆ ಸುಪ್ರೀಂ ತಾತ್ಕಾಲಿಕ ತಡೆ: 10 ದಿನದಲ್ಲಿ ಸರ್ವೆ ವರದಿ ಸಲ್ಲಿಕೆಗೆ ಸೂಚನೆ

ನವದೆಹಲಿ: ಉತ್ತರ ಪ್ರದೇಶದಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿರುವ ಸಂಭಾಲ್ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.  ಜಾಮಾ ಮಸೀದಿ ಸಮೀಕ್ಷೆಗೆ ತಾತ್ಕಾಲಿಕ ತಡೆ ನೀಡಿರುವ ಮಾನ್ಯ ಸರ್ವೋಚ್ಛ ನ್ಯಾಯಾಲಯ 10 ದಿನಗಳ ಒಳಗೆ ಮಸೀದಿ ಆವರಣದಲ್ಲಿನ ಸಮೀಕ್ಷಾ ವರದಿಯನ್ನು ಆದೇಶಿಸಿದೆ. ಅಲ್ಲದೆ, ಮುಂದಿನ ವಿಚಾರಣೆಯನ್ನು ಜನವರಿ 8ಕ್ಕೆ ಮುಂದೂಡಿ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ನವೆಂಬರ್ 19ರ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಸೀದಿ ಆಡಳಿತ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್ ಅವರ ಪೀಠ, ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ. 10 ದಿನಗಳೊಳಗೆ ಸಮೀಕ್ಷಾ ವರದಿ ಸಲ್ಲಿಸುವಂತೆ ನ್ಯಾಯಾಲಯ ನೇಮಿಸಿದ ಕಮಿಷನರ್‌ಗೆ ಸೂಚಿಸಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಜನವರಿ 8ಕ್ಕೆ ನಿಗದಿ ಪಡಿಸಿದೆ.

ಸಿವಿಲ್ ನ್ಯಾಯಾಧೀಶ ಆದಿತ್ಯ ಸಿಂಗ್ ಅವರು ಈ ವಿಷಯವನ್ನು ಸಂಪೂರ್ಣವಾಗಿ ಆಲಿಸಿದ್ದಾರೆ ಎಂದು ನ್ಯಾಯಾಲಯದಿಂದ ನೇಮಕಗೊಂಡ ಆಯುಕ್ತ ರಾಕೇಶ್ ಸಿಂಗ್ ರಾಘವ್ ಸುಪ್ರೀಂ ನ್ಯಾಯಪೀಠಕ್ಕೆ ತಿಳಿಸಿದರು. ಮಸೀದಿಯ ಸಮೀಕ್ಷಾ ವರದಿ ಇನ್ನೂ ಪೂರ್ಣಗೊಂಡಿಲ್ಲ. ಸಮೀಕ್ಷಾ ವರದಿ ಸಲ್ಲಿಕೆಗೆ ಹೆಚ್ಚುವರಿ ಕಾಲಾವಕಾಶ ಬೇಕು ಎಂದು ರಾಕೇಶ್​ ಸಿಂಗ್ ರಾಘವ್ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆಯುಕ್ತ ರಾಕೇಶ್​ ಸಿಂಗ್ ಅವರ ಮನವಿಯನ್ನು ಪುರಸ್ಕರಿಸಿದ ಮಾನ್ಯ ಸರ್ವೋಚ್ಛ ನ್ಯಾಯಾಲಯ ವಿಚಾರಣೆಯನ್ನು ಜನವರಿ 8ಕ್ಕೆ ಮುಂದೂಡಿ ಆದೇಶ ನೀಡಿದೆ.

ಉತ್ತರ ಪ್ರದೇಶದ ಸಂಭಾಲ್​ನಲ್ಲಿ ಮೊಘಲರ ಕಾಲದಲ್ಲಿ ಪ್ರಾಚೀನ ಹರಿಹರ ದೇವಾಲಯವನ್ನು ಕೆಡವಿ ಅದರ ಮೇಲೆ ಜಾಮಾ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಆರೋಪದ ಮೇರೆಗೆ ಉತ್ತರ ಪ್ರದೇಶ ಕೋರ್ಟ್ ಸಮೀಕ್ಷೆ ನಡೆಸುವಂತೆ ಆದೇಶ ನೀಡಿತ್ತು. ಇದಕ್ಕಾಗಿ ಸಮೀಕ್ಷಾ ತಂಡವನ್ನೂ ಕೂಡ ರಚಿಸಿತ್ತು. ಆದರೆ ನವೆಂಬರ್ 19ರಂದು ಸಂಭಾಲ್​ನ ಜಾಮಾ ಮಸೀದಿ ಆವರಣದಲ್ಲಿ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಲು ಮುಂದಾದಾಗ ಮುಸ್ಲಿಂ ಸಮುದಾಯದ ಕೆಲವರು ಸಮೀಕ್ಷೆಗೆ ಅಡ್ಡಿ ಪಡಿಸಿದ್ದರು. ಬಳಿಕ ಸಂಭಾಲ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿತ್ತು.

ನವೆಂಬರ್ 24 ರಂದು ಎರಡನೇ ಸಮೀಕ್ಷೆಯ ಸಮಯದಲ್ಲಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿ ಮಸೀದಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದರು. ಈ ಸಂಘರ್ಷದಲ್ಲಿ ನಾಲ್ವರು ಜೀವ ಕಳೆದುಕೊಂಡು ಹಲವರು ಗಾಯಗೊಂಡಿದ್ದರು.

Comments (0)

Your email address will not be published. Required fields are marked *

Back to top button