Wednesday, January 28, 2026
24.9 C
Bengaluru
Google search engine
LIVE
ಮನೆರಾಜಕೀಯಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣ ವಜಾಗೊಳಿಸಿದೆ. ಕರ್ನಾಟಕ ಮತ್ತು ತಮಿಳು ನಾಡು ಮಧ್ಯೆ ಕಾವೇರಿ ನೀರು ಹಂಚಿಕೆಯ ಮೇಕೆದಾಟು ಯೋಜನೆ ವಿವಾದದಲ್ಲಿ ಪ್ರವೇಶಿಸಲು ನಿರಾಕರಿಸಿದೆ. ಹೀಗಾಗಿ ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ದೊಡ್ಡ ಗೆಲುವು ಲಭಿಸಿದಂತಾಗಿದೆ.

ಕಳೆದ ಏಳು ವರ್ಷಗಳಿಂದ ತಮಿಳುನಾಡು ಈ ಯೋಜನೆಗೆ ಅಡ್ಡಗಾಲು ಹಾಕುತ್ತಾ ಬಂದಿತ್ತಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಇದೀಗ ಆ ಅರ್ಜಿಯನ್ನು ವಜಾಗೊಳಿಸಿದ ಹಿನ್ನಲೆಯಲ್ಲಿ ಯೋಜನೆಗೆ ಮುಂದುವರೆಯಲು ಕರ್ನಾಟಕಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ.

ಮೇಕೆದಾಟು ಯೋಜನೆ ಪ್ರಶ್ನಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಮೇಕೆದಾಟು ಯೋಜನೆಯು ಇನ್ನೂ ಆರಂಭಿಕ ಹಂತದಲ್ಲಿದ್ದು, ಯಾವುದೇ ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ. ಈ ಯೋಜನೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ಜಲ ಆಯೋಗದಂತಹ ತಜ್ಞ ಸಂಸ್ಥೆಗಳ ಪರಿಶೀಲನೆಯಲ್ಲಿದೆ. ಹೀಗಾಗಿ ಮಧ್ಯಪ್ರವೇಶ ಮಾಡಲ್ಲ ಎಂದು ಹೇಳಿದೆ.

ಆದೇಶಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ಉಪ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಈ ತೀರ್ಪು ಕರ್ನಾಟಕಕ್ಕೆ ಹಿನ್ನಡೆಯಲ್ಲ, ಬದಲಿಗೆ ನ್ಯಾಯ ತಂದಿದೆ ಎಂದು ಹೇಳಿದರು. ಮೇಕೆದಾಟು ಕರ್ನಾಟಕದ ನ್ಯಾಯಯುತ ಯೋಜನೆ ಎಂದು ಕರೆದ ಅವರು, ಇದು ನಮ್ಮ ಹಕ್ಕು ಮತ್ತು ನಮ್ಮ ನೀರು. ನಾವು ತೊಂದರೆ ನೀಡುತ್ತಿಲ್ಲ. ತಮಿಳುನಾಡಿಗೆ ಲಾಭವಾಗಲಿದೆ. ಆದೇಶದ ಪ್ರಕಾರ ಅವರಿಗೆ ಸಾಕಷ್ಟು ನೀರು ಸಿಗುತ್ತದೆ. ನಾವು ಯೋಜನೆಯೊಂದಿಗೆ ಮುಂದುವರಿಯಬೇಕು. ಇದನ್ನು ನಮ್ಮ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇದು ಬೆಂಗಳೂರಿಗರ ವಿಜಯವಾಗಿದೆ ಎಂದು ಹೇಳಿದರು.

ತಮಿಳು ನಾಡು ಸರ್ಕಾರದ ಸಹಕಾರ ಕೋರಿದ ಅವರು, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಅವರಿಗೆ ಬೇರೆ ಆಯ್ಕೆ ಇಲ್ಲ. ಅವರು ನ್ಯಾಯ ಒದಗಿಸಬೇಕು ಎಂದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments