ಬೆಂಗಳೂರು: ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯದ ಮಹಿಳಾ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ.. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳೆಯರಿಗೆ ಋತುಚಕ್ರ ರಜೆ ನೀತಿ-2025ಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.. ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಅಂಗೀಕಾರ ನೀಡಲಾಗಿದೆ.
ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ರಜೆ ನೀಡುವ ಈ ನೀತಿಯು ರಾಜ್ಯದ ಸುಮಾರು 60 ಲಕ್ಷ ಮಹಿಳಾ ಉದ್ಯೋಗಿಗಳಿಗೆ ಲಾಭ ನೀಡಲಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕಾರ್ಮಿಕ ಇಲಾಖೆಯ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ. ಸದ್ಯದಲ್ಲೇ ಸರ್ಕಾರಿ ಆದೇಶ ಹೊರಡಿಸಲಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಘೋಷಿಸಿದ್ದಾರೆ. ಇದು ರಾಜ್ಯದ ಎಲ್ಲಾ ಮಹಿಳಾ ಉದ್ಯೋಗಿಗಳಿಗೂ ಅನ್ವಯವಾಗಲಿದೆ. ಅವರ ಋತುಚಕ್ರದ ಸಂದರ್ಭದಲ್ಲಿ ತಿಂಗಳಿಗೆ ಒಂದು ವೇತನ ಸಹಿತ ರಜೆ ನೀಡಲು ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಎಲ್ಲಾ ವಲಯಗಳಲ್ಲೂ ಇದು ಅನ್ವಯವಾಗಲಿದೆ.
ಕಾರ್ಮಿಕ ಇಲಾಖೆಯು ಕಳೆದ ಹಲವು ತಿಂಗಳುಗಳಿಂದ ಈ ನೀತಿಯನ್ನು ರೂಪಿಸುತ್ತಾ ಬಂದಿದ್ದು, ವಿವಿಧ ಇಲಾಖೆಗಳು, ಸಂಘಟನೆಗಳು ಮತ್ತು ಸಾಮಾನ್ಯ ಜನರಿಂದ ಇದಕ್ಕೆ ಸಹಾನುಮತಿ ಇತ್ತು. 2024ರಲ್ಲಿ ರಚಿಸಲ್ಪಟ್ಟ ಸಮಿತಿಯು ಋತುಚಕ್ರ ರಜೆಯನ್ನು ಮಹಿಳೆಯರ ಹಕ್ಕು ಎಂದು ಗುರುತಿಸಿ, ವಾರ್ಷಿಕ 6 ದಿನಗಳ ರಜೆಯನ್ನು ಸಿಫಾರಸು ಮಾಡಿತ್ತು. ಆದರೆ, ಸಂಪುಟ ಸಭೆಯಲ್ಲಿ ಇದನ್ನು ತಿಂಗಳಿಗೊಂದು ದಿನ (12 ದಿನಗಳು) ಎಂದು ವಿಸ್ತರಿಸಲಾಯಿತು. ಇದು ಗಾರ್ಮೆಂಟ್, ಆಯುಷ್ಯ, ಐಟಿ ಮತ್ತು ಇತರ ಉದ್ಯಮಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸಮಾನವಾಗಿ ಅನ್ವಯಿಸುತ್ತದೆ.


