ದೇಶ/ವಿದೇಶ

ನೈಸರ್ಗಿಕ ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋದ ಲಂಕಾ ಸುಪ್ರೀಂ ಜಡ್ಜ್..!

ಶ್ರೀಲಂಕಾ: ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿಯೊಬ್ಬರು ತಮ್ಮ ಘನತೆಗೆ ಧಕ್ಕೆ ತಂದಿರುವ ಆನ್‌ಲೈನ್ ಬರಹಗಳ ವಿರುದ್ಧ ಕಾನೂನು ಹೋರಾಟ ನಡೆಸಲು ಭಾರತದ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಮೂರ್ತಿ ದಿಲೀಪ್ ನವಾಜ್ ಸಲ್ಲಿಸಿರುವ ಈ ಅರ್ಜಿ ವಿಶೇಷ ಕುತೂಹಲ ಮೂಡಿಸಿದ್ದು, “ತಮ್ಮ ಅಹವಾಲಿಗೆ ತಾವೇ ತೀರ್ಪು ನೀಡಬಾರದು” ಎಂಬ ನೈಸರ್ಗಿಕ ನ್ಯಾಯದ ತತ್ವವನ್ನು ಪಾಲಿಸಲು ನೆರೆಯ ರಾಷ್ಟ್ರವಾದ ಭಾರತದ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಮ್ಮ ವಿರುದ್ಧ ಪ್ರಕಟವಾಗಿರುವ ಮಾನಹಾನಿಕರ ಮತ್ತು ದುರುದ್ದೇಶಪೂರಿತ ಆನ್‌ಲೈನ್ ಲೇಖನಗಳನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ.

ಅರ್ಜಿಯ ವಿವರದ ಪ್ರಕಾರ, 2015 ಮತ್ತು 2020ರಲ್ಲಿ ಕೆಲವು ಆನ್‌ಲೈನ್ ಮಾಧ್ಯಮಗಳು ನ್ಯಾಯಮೂರ್ತಿ ದಿಲೀಪ್ ನವಾಜ್ ಅವರ ವಿರುದ್ಧ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ್ದವು. ಈ ಬರಹಗಳಿಂದ ತಮ್ಮ ಸುದೀರ್ಘ ವೃತ್ತಿಜೀವನದ ಗೌರವಕ್ಕೆ ಮತ್ತು ವೈಯಕ್ತಿಕ ಘನತೆಗೆ ತೀವ್ರ ಧಕ್ಕೆ ಉಂಟಾಗಿದೆ ಎಂದು ದೂರಿದ್ದಾರೆ. ಶ್ರೀಲಂಕಾದಲ್ಲಿ ಈ ಬಗ್ಗೆ ದೂರು ನೀಡಿದರೆ ಹಿತಾಸಕ್ತಿ ಸಂಘರ್ಷ ಉಂಟಾಗಬಹುದು ಎಂಬ ಕಾರಣಕ್ಕೆ, ತಟಸ್ಥ ನೆಲೆಯಲ್ಲಿ ನ್ಯಾಯ ಪಡೆಯಲು ಅವರು ಬೆಂಗಳೂರಿನ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯನ್ನು ಕೈಗೆತ್ತಿಕೊಂಡಿರುವ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠವು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಗೂಗಲ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ. ಜಾಗತಿಕ ಮಟ್ಟದಲ್ಲಿ ಡಿಜಿಟಲ್ ಮಾಹಿತಿಯನ್ನು ನಿಯಂತ್ರಿಸುವ ಗೂಗಲ್ ಇಂಡಿಯಾ ಮತ್ತು ಗೂಗಲ್ ಇಂಕ್ ಸಂಸ್ಥೆಗಳಿಗೆ ಈ ಪ್ರಕರಣದಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ.

ಹೆಚ್ಚುವರಿಯಾಗಿ, ವಿವಾದಿತ ಲೇಖನಗಳನ್ನು ಪ್ರಕಟಿಸಿರುವ ‘ಕೊಲಂಬೋ ಟೆಲಿಗ್ರಾಫ್’ ಮತ್ತು ‘ಲಂಕಾ ಇ-ನ್ಯೂಸ್’ ಎಂಬ ಡಿಜಿಟಲ್ ಮಾಧ್ಯಮಗಳಿಗೂ ಹೈಕೋರ್ಟ್ ನೋಟಿಸ್ ನೀಡಿದೆ. ಅಂತಾರಾಷ್ಟ್ರೀಯ ಮಟ್ಟದ ನ್ಯಾಯಾಧೀಶರೊಬ್ಬರು ಡಿಜಿಟಲ್ ಯುಗದ “ರೈಟ್ ಟು ಬಿ ಫಾರ್ಗಾಟನ್” ಅಥವಾ ಮಾನಹಾನಿ ತಡೆಗಾಗಿ ಭಾರತದ ನ್ಯಾಯಾಲಯಕ್ಕೆ ಬಂದಿರುವುದು ಕಾನೂನು ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಹೊರಹೊಮ್ಮಿದೆ.

Comments (0)

Your email address will not be published. Required fields are marked *

Back to top button