ನವದೆಹಲಿ: ದೆಹಲಿಯ ಹಲವು ಶಾಲೆಗಳಿಗೆ ಬರುವ ಬಾಂಬ್ ಬೆದರಿಕೆ ಕರೆ ನಿಲ್ಲುತ್ತಿಲ್ಲ, ದೆಹಲಿಯ ಆರ್‌ಕೆ ಪುರಂನಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್ ಸೇರಿದಂತೆ ಹಲವು ಶಾಲೆಗಳಿಗೆ ಇಂದು ಬೆಳಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ. ಕೂಡಲೇ ತನಿಖೆ ಮಾಡಿರುವ ಪೊಲೀಸರು ಇದು ಹುಸಿ ಬಾಂಬ್ ಬೆದರಿಕೆ ಎಂದು ಹೇಳಿದ್ದಾರೆ. ದೆಹಲಿಯಾದ್ಯಂತ 30 ಶಾಲೆಗಳು ನಕಲಿ ಬಾಂಬ್ ಬೆದರಿಕೆ ಸ್ವೀಕರಿಸಿವೆ ಎಂದು ಆಗ್ನೇಯ ದೆಹಲಿ ಪೊಲೀಸ್ ಉಪ ಆಯುಕ್ತ (DCP) ರವಿಕುಮಾರ್ ಸಿಂಗ್ ನಿನ್ನೆ ಹೇಳಿದ ಬಳಿಕ ಇಂದು ಮತ್ತೆ ಬೆದರಿಕೆ ಇಮೇಲ್ ಗಳು ಬಂದಿವೆ.
ಎಎಪಿ ಕಳವಳ
ಡಿಸೆಂಬರ್ 13 ರಂದು ಕೇಜ್ರಿವಾಲ್ ಅವರು ಇಂತಹ ಬೆದರಿಕೆಗಳು ಬರುವುದು ‘ಅತ್ಯಂತ ಗಂಭೀರ ಮತ್ತು ಚಿಂತಾಜನಕ’ ಎಂದು ಹೇಳಿದ್ದಾರೆ. ಇದರಿಂದ ಮಕ್ಕಳ ಮೇಲೆ ಕೆಟ್ಟಪರಿಣಾಮ ಬೀರುತ್ತದೆ ಎಂದಿದ್ದಾರೆ.
ಮತ್ತೊಂದೆಡೆ ದೆಹಲಿ ಸಿಎಂ ಅತಿಶಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ ಆಡಳಿತದಲ್ಲಿರುವ ಕೇಂದ್ರ ಸರ್ಕಾರ ಭದ್ರತೆ ಒದಗಿಸುವ ಕಾರ್ಯದಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ದಿನನಿತ್ಯ ಸುಲಿಗೆ, ಕೊಲೆಗಳು, ಗುಂಡಿನ ದಾಳಿಯ ಘಟನೆಗಳ ನಂತರ ಈಗ ಶಾಲೆಗಳ ಮೇಲೆ ಬಾಂಬ್ ದಾಳಿಯ ಬೆದರಿಕೆಗಳು ಬರುತ್ತಿವೆ. ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹಿಂದೆಂದೂ ಇಷ್ಟು ಹದಗೆಟ್ಟಿರಲಿಲ್ಲ. ಬಿಜೆಪಿ ಆಡಳಿತದ ಕೇಂದ್ರ ಸರ್ಕಾರವು ದೆಹಲಿಯ ಜನರಿಗೆ ಭದ್ರತೆ ಒದಗಿಸುವ ಕಾರ್ಯದಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.