ರಾಜ್ಯಸುದ್ದಿ

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಾವು; ಕೌಟುಂಬಿಕ ಕಲಹವೋ ಅಥವಾ ಸಂಚೋ?

ಕಾಸರಗೋಡು: ಪ್ರಖ್ಯಾತ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಚಿನ್ನು ಪಪ್ಪು ಅವರ ನಿಗೂಢ ಸಾವು ಅಭಿಮಾನಿಗಳಲ್ಲಿ ಮತ್ತು ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ. ನಿನ್ನೆ ಮಧ್ಯಾಹ್ನ ಕಾಸರಗೋಡಿನ ಚೂರಿ ಬಳಿಯ ಬಾಡಿಗೆ ಮನೆಯಲ್ಲಿ ರೇಷ್ಮಾ ಶವವಾಗಿ ಪತ್ತೆಯಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಇವರು, ತಮ್ಮ ವಿಶಿಷ್ಟ ಕಾಸರಗೋಡು ಶೈಲಿಯ ಮಲಯಾಳಂ ಮತ್ತು ತುಳು ಭಾಷೆಯ ವಿಡಿಯೋಗಳ ಮೂಲಕ ಮನೆಮಾತಾಗಿದ್ದರು.

ಕಾಸರಗೋಡಿನ ಅಡೂರು ಮೂಲದ 24 ವರ್ಷದ ರೇಷ್ಮಾ, ತಮ್ಮ ಬಾಡಿಗೆ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಹೋದರ ಮೊದಲು ಇದನ್ನು ಗಮನಿಸಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಇದೊಂದು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದರೂ, ಸಾವಿನ ಸುತ್ತ ಹಲವು ಸಂಶಯಗಳು ದಟ್ಟವಾಗಿವೆ. ರೇಷ್ಮಾ ಅವರ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರ ಕರೆ ದಾಖಲೆಗಳು ಮತ್ತು ಸಂದೇಶಗಳನ್ನು ಪರಿಶೀಲಿಸುತ್ತಿದ್ದಾರೆ.

ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ರೇಷ್ಮಾ, ಇತ್ತೀಚೆಗಷ್ಟೇ ಪತಿಯಿಂದ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿದ್ದರು. ಅವರಿಗೆ ನಾಲ್ಕು ವರ್ಷದ ಪುಟ್ಟ ಮಗುವಿದ್ದು, ಮಗು ಪ್ರಸ್ತುತ ಅಡೂರಿನಲ್ಲಿರುವ ರೇಷ್ಮಾ ಪೋಷಕರ ಬಳಿ ಇದೆ. ವಿಚ್ಛೇದನದ ನಂತರ ಅವರು ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಲ್ಲದೆ, ಸಾವಿಗೂ ಮುನ್ನ ಅವರ ಮನೆಗೆ ಪರಿಚಿತ ವ್ಯಕ್ತಿಯೊಬ್ಬರು ಬಂದು ಹೋಗುತ್ತಿದ್ದ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗ್ರಾಮೀಣ ಬದುಕು, ತುಳು ಸಂಸ್ಕೃತಿ ಮತ್ತು ಕಾಸರಗೋಡಿನ ಆಚಾರ-ವಿಚಾರಗಳ ಬಗ್ಗೆ ಸರಳವಾಗಿ ವಿಡಿಯೋ ಮಾಡುತ್ತಿದ್ದ ಇವರ ಸಾವು ಕರಾವಳಿ ಭಾಗದ ಕಂಟೆಂಟ್ ಕ್ರಿಯೇಟರ್‌ಗಳಲ್ಲಿ ಬೇಸರ ಮೂಡಿಸಿದೆ. ವಾರದ ಹಿಂದಷ್ಟೇ ಅವರು ಹಂಚಿಕೊಂಡಿದ್ದ ಪೋಸ್ಟ್ ಸಾವಿರಾರು ಲೈಕ್ಸ್ ಗಳಿಸಿತ್ತು. ಅವರ ಸಾವಿನ ವಾರ್ತೆ ಕೇಳಿ ಹಲವು ಇನ್‌ಫ್ಲುಯೆನ್ಸರ್ಸ್‌ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.

Comments (0)

Your email address will not be published. Required fields are marked *

Back to top button