ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಾಲಶ್ ಮುಚ್ಚಲ್ ಮದುವೆ ಯಾಕೆ ರದ್ದಾಯಿತು ಎಂಬ ಕುತೂಹಲಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಪಾಲಶ್ ಬೇರೊಬ್ಬ ಮಹಿಳೆಯೊಂದಿಗೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದಿದ್ದೇ ಈ ಸಂಬಂಧ ಮುರಿಯಲು ಕಾರಣ ಎಂದು ನಟ ಹಾಗೂ ನಿರ್ಮಾಪಕ ವಿಧ್ಯಾನ್ ಮಾನೆ ಗಂಭೀರ ಆರೋಪ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 2025ರ ನವೆಂಬರ್‌ನಲ್ಲಿ ಇಬ್ಬರ ಮದುವೆಯಾಗಬೇಕಿತ್ತು. ಆದರೆ, ಮದುವೆಯ ಸಿದ್ಧತೆಗಳ ನಡುವೆಯೇ ಪಾಲಶ್ ಬೇರೊಬ್ಬ ಮಹಿಳೆಯೊಂದಿಗೆ ಏಕಾಂತದಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಇದನ್ನು ಕಂಡು ಆಕ್ರೋಶಗೊಂಡ ಸ್ಮೃತಿ ಪಾಲಶ್‌ಗೆ ಬೈದಿದ್ದರು ಎಂದು ವಿಧ್ಯಾನ್ ತಿಳಿಸಿದ್ದಾರೆ.
ಪಾಲಶ್ ಮಾತ್ರವಲ್ಲ, ಅವರ ಇಡೀ ಕುಟುಂಬವೇ ಸರಿಯಿಲ್ಲ. ಈ ಘಟನೆಯ ನಂತರ ಮಂಧಾನ ಕುಟುಂಬ ಪಾಲಶ್ ಜೊತೆಗಿನ ಸಂಬಂಧ ಕಡಿದುಕೊಂಡಿದೆ ಎಂದು ಅವರು ಹೇಳಿದ್ದಾರೆ. ಮದುವೆ ವಿಚಾರ ಮಾತ್ರವಲ್ಲದೆ, ಪಾಲಶ್ ಮುಚ್ಚಲ್ ವಿರುದ್ಧ ಆರ್ಥಿಕ ವಂಚನೆಯ ಆರೋಪವೂ ಕೇಳಿಬಂದಿದೆ.
ರಿಲೀಸ್ ಆಗದ ಸಿನಿಮಾಗೆ ಸಂಬಂಧಿಸಿದಂತೆ ನನಗೆ 40 ಲಕ್ಷ ರೂಪಾಯಿಗೂ ಹೆಚ್ಚು ವಂಚನೆ ಮಾಡಿದ್ದಾರೆ. ಹಣ ಕೇಳಲು ಹೋದರೆ, ಇನ್ನೂ 10 ಲಕ್ಷ ಹೂಡಿಕೆ ಮಾಡುವಂತೆ ಪಾಲಶ್ ತಾಯಿ ನನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ, ಎಂದು ವಿಧ್ಯಾನ್ ಆರೋಪಿಸಿದ್ದಾರೆ.
ಈ ಹಣಕಾಸಿನ ವಂಚನೆಗೆ ಸಂಬಂಧಿಸಿದಂತೆ ಈಗಾಗಲೇ ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಹ ಕಲಾವಿದರಿಗೂ ಪಾಲಶ್ ಹಣ ಬಾಕಿ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.
“ನಾನು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ. ಪಾಲಶ್ ಜೊತೆಗಿನ ಚಾಟ್‌ಗಳು, ಕಾಲ್ ರೆಕಾರ್ಡಿಂಗ್ ಮತ್ತು ಹಣಕಾಸಿನ ವ್ಯವಹಾರದ ಎಲ್ಲಾ ಸಾಕ್ಷಿಗಳು ನನ್ನ ಬಳಿ ಇವೆ. ಇದನ್ನು ಪೊಲೀಸರು ಮತ್ತು ಮಾಧ್ಯಮಗಳಿಗೆ ನೀಡಲು ನಾನು ಸಿದ್ಧನಿದ್ದೇನೆ,” ಎಂದು ವಿಧ್ಯಾನ್ ಮಾನೆ ಸವಾಲು ಹಾಕಿದ್ದಾರೆ.


