Wednesday, April 30, 2025
24 C
Bengaluru
LIVE
ಮನೆ#Exclusive NewsTop Newsಬಾಂಗ್ಲಾ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ; ಫೈನಲ್‌ ಪ್ರವೇಶಿಸಿದ ಭಾರತ

ಬಾಂಗ್ಲಾ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ; ಫೈನಲ್‌ ಪ್ರವೇಶಿಸಿದ ಭಾರತ

ಡಂಬುಲ್ಲಾ: ಮಹಿಳಾ ಏಷ್ಯಾಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತೀಯ ಮಹಿಳಾ ಕ್ರಿಕೆಟ್‌ ತಂಡ ಸತತ 5ನೇ ಬಾರಿಗೆ ಫೈನಲ್‌ ತಲುಪಿತು.

2012, 2016, 2018, 2022ರಲ್ಲಿ ಫೈನಲ್‌ ಪ್ರವೇಶಿಸಿದ್ದ ಭಾರತ 2018 ಹೊರತುಪಡಿಸಿ ಮೂರು ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 2018ರಲ್ಲಿ ಬಾಂಗ್ಲಾ ವಿರುದ್ಧವೇ ಸೋತು ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಸತತ 5ನೇ ಬಾರಿಗೆ ಫೈನಲ್‌ ಪ್ರವೇಶಿಸಿರುವ ಭಾರತ ಮತ್ತೊಮ್ಮೆ ಚಾಂಪಿಯನ್‌ ಆಗಿ ಹೊರಹೊಮ್ಮುವ ಭರವಸೆ ಮೂಡಿಸಿದೆ.

ಶುಕ್ರವಾರ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 80 ರನ್​ ಬಾರಿಸಿತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಭಾರತ 11 ಓವರ್​ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೇ 83 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಚೇಸಿಂಗ್‌ ಆರಂಭಿಸಿದ ಭಾರತದ ಪರ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ 26 ರನ್‌ (28 ಎಸೆತ, 2 ಬೌಂಡರಿ), ಸ್ಮೃತಿ ಮಂಧಾನ 55 ರನ್‌ (39 ಎಸೆತ, 9 ಬೌಂಡರಿ, 1 ಸಿಕ್ಸರ್‌) ಬಾರಿಸಿ ಅಜೇಯರಾಗುಳಿದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಬಾಂಗ್ಲಾ ದೇಶದ ವಿರುದ್ಧ ಭಾರತದ ಬೌಲರ್‌ಗಳು ಘಾತುಕ ದಾಳಿ ನಡೆಸಿದರು. ಮಧ್ಯಮವೇಗಿ ರೇಣುಕಾ ಸಿಂಗ್‌ 4 ಓವರ್‌ಗಳಲ್ಲಿ 1 ಮೇಡಿನ್‌ ಸಹಿತ ಕೇವಲ 10 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ ಕಿತ್ತರು. ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 50 ವಿಕೆಟ್​ಗಳ ಮೈಲುಗಲ್ಲು ತಲುಪಿದರು. ಇದರೊಂದಿಗೆ ರಾಧಾ ಯಾದವ್‌ 4 ಓವರ್‌ಗಳಲ್ಲಿ 3 ವಿಕೆಟ್‌ ಕಿತ್ತರೆ, ಪೂಜಾ ವಸ್ತ್ರಕಾರ್‌ ಹಾಗೂ ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್‌ ಕಿತ್ತರು.

ಬಾಂಗ್ಲಾ ಪರ ನಾಯಕಿ ನಿಗರ್ ಸುಲ್ತಾನಾ 51 ಎಸೆತ ಎದುರಿಸಿ 32 ರನ್​, ಶೋರ್ನಾ ಅಖ್ತರ್​ 19 ರನ್ ಗಳಿಸಿದ್ರೆ, ಉಳಿದ ಆಟಗಾರರು ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದರು. ಶುಕ್ರವಾರ (ಇಂದು) ರಾತ್ರಿ ನಡೆಯುವ ಮತ್ತೊಂದು ಸೆಮಿಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಆತಿಥೇಯ ಶ್ರೀಲಂಕಾ ಮುಖಾಮುಖಿಯಾಗಲಿವೆ. ಗೆದ್ದ ತಂಡ ಫೈನಲ್‌ನಲ್ಲಿ ಭಾರತ ತಂಡದೊಂದಿಗೆ ಫೈನಲ್‌ನಲ್ಲಿ ಸೆಣಸಲಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments