ಪುತ್ತೂರು: ನೆಲ್ಯಾಡಿ ಗ್ರಾಮದ ಮರಂಕಲ ನಿವಾಸಿಯಾದ ಅಣ್ಣು ನಾಯ್ಕ ಎಂಬವವರ ಜಮೀನಿಗೆ ಬೇಬಿ ಜೋಸೆಫ್, ಕಡಬ ತಹಶೀಲ್ದಾರ್ ಮತ್ತು ಉಪ್ಪಿನಂಗಡಿ ಪೊಲೀಸರು ಅಕ್ರಮವಾಗಿ ಪ್ರವೇಶಿಸಿ ಅಣ್ಣು ನಾಯ್ಕ ಮತ್ತು ಅವರ ಪುತ್ರಿ ವಾರಿಜ ಅವರ ಮೇಲೆ ದೌರ್ಜನ್ಯ ಎಸೆಗಿ ಬೇಲಿ ನಾಶ ಮಾಡಿದ್ದಾರೆ. ಇದರಿಂದಾಗಿ ತೀವ್ರವಾಗಿ ನೊಂದು ವಾರಿಜ ಅವರು ವಿಷಸೇವಿಸಿದ್ದು, ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನೊಂದ ಕುಟುಂಬಕ್ಕೆ ನ್ಯಾಯ ಒದಗಿಸದಿದ್ದಲ್ಲಿ ರಾಜಾದ್ಯಂತ ಹೋರಾಟ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.
ಅಣ್ಣು ನಾಯ್ಕ ಅವರಿಗೆ ಸರ್ಕಾರದಿಂದ ಮಂಜೂರಾದ ೧.೧೮ ಎಕ್ರೆ ಜಾಗವಿದ್ದು, ಈ ಜಾಗದ ಪಕ್ಕದಲ್ಲಿರುವ ಬೇಬಿ ಜೋಸೆಫರ ಮನೆಗೆ ಹೋಗುವ ಪಂಚಾಯಿತಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿತ್ತು. ರಾಷ್ಟೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಪಂಚಾಯಿತಿ ರಸ್ತೆಯನ್ನು ಮರು ಸಂಪರ್ಕಗೊಳಿಸಲಾಗಿದ್ದು, ಈ ಹಿನ್ನಲೆಯಲ್ಲಿ ಅಣ್ಣು ನಾಯ್ಕ ಅವರು, ತಾತ್ಕಾಲಿಕವಾಗಿ ನೀಡಿದ್ದ ರಸ್ತೆಯನ್ನು ಮುಚ್ಚಿ ಕೃಷಿ ಕಾಯಕ ಮಾಡಿಕೊಂಡಿದ್ದಾರೆ.
ಇದನ್ನೇ ನೆಪ ಮಾಡಿಕೊಂಡು ಬೇಬಿ ಜೋಸೆಫ್‌ರವರು ಅಣ್ಣು ನಾಯ್ಕ ಅವರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದಾರೆ. ಜಂಟಿ ಸರ್ವೆ ಕೂಡ ನಡೆದಿದ್ದು, ಸರ್ವೆ ನಡೆಸಿದ ಅಧಿಕಾರಿಗಳು ಇದು ಅಣ್ಣು ನಾಯ್ಕ ಅವರಿಗೆ ಸಂಬಂಧಿಸಿದ ಜಾಗವೆಂದು ಖಚಿತಪಡಿಸಿದ್ದಾರೆ ಆದರೂ ಈ ಆದೇಶವನ್ನು ದಿಕ್ಕರಿಸಿ ಬೇಬಿ ಜೋಸೆಫ್, ಕಡಬ ತಹಶೀಲ್ದಾರ್ ಮತ್ತು ಉಪ್ಪಿನಂಗಡಿ ಪೊಲೀಸರು ಜ.೬ರಂದು ಅಣ್ಣು ನಾಯ್ಕ ಅವರ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ, ವಯೋ ವೃದ್ಧರಾದ ಅಣ್ಣು ನಾಯ್ಕ ಮತ್ತು ಅವರ ಪುತ್ರಿ ವಾರಿಜಾ ಅವರ ಮೇಲೆ ದೌರ್ಜನ್ಯ ಎಸಗಿ ಬೇಲಿ ನಾಶಪಡಿಸಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಉಳ್ಳವರ ದರ್ಪಕ್ಕೆ ಪೊಲೀಸ್ರು ಕಡಿವಾಣ ಹಾಕ್ತಾರಾ ಕಾದು ನೋಡಬೇಕು.