ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಹಣವನ್ನು ಎಸ್‌ಐಟಿ ಮುಟ್ಟುಗೋಲು ಹಾಕಿಕೊಂಡಿರುವ ಅಂಕಿ-ಅಂಶವನ್ನು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದಾರೆ.
ಚಿನ್ನ ಇತರೆ ಬೆಲೆಬಾಳುವ ವಸ್ತು ಸೇರಿದಂತೆ ಎಸ್‌ಐಟಿ ಒಟ್ಟು 85,25,07,698 ರೂ. ಹಣ ಜಪ್ತಿ ಮಾಡಿದೆ ಎಂದು ಸಿಎಂ ತಿಳಿಸಿದ್ದಾರೆ. ಅಂಕಿ-ಅಂಶದ ವಿವರ ಹೀಗಿದೆ.
ಪ್ರಕರಣದ ಆರೋಪಿಗಳಾದ ಸತ್ಯನಾರಾಯಣ ವರ್ಮಾ, ಜೆ.ಜಿ.ಪದ್ಮನಾಭ, ನಾಗೇಶ್ವರ ರಾವ್, ಚಂದ್ರಮೋಹನ್, ಜಿ.ಕೆ.ಜಗದೀಶ್ ಅವರಿಂದ ಒಟ್ಟು 14,33,35,000 ರೂ. ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಚಂದ್ರಮೋಹನ್ ಮತ್ತು ಜಿ.ಕೆ.ಜಗದೀಶ್ ಅವರಿಂದ ಕ್ರಮವಾಗಿ 207 ಮತ್ತು 47.6 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.
ವಿವಿಧ 217 ಬ್ಯಾಂಕ್ ಅಕೌಂಟ್‌ಗಳನ್ನು ಗುರುತಿಸಿ ಅವುಗಳಲ್ಲಿದ್ದ 13,72,94,132 ರೂ. ಮೊತ್ತವನ್ನು ಫ್ರೀಜ್ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಸತ್ಯನಾರಾಯಣ ವರ್ಮಾ ಮತ್ತು ಇತರೆ ಆರೋಪಿಗಳು ಅಕ್ರಮವಾಗಿ ಬೇರೆ ವ್ಯಕ್ತಿಗಳ ಖಾತೆಗಳಿಗೆ ವರ್ಗಾಯಿಸಿದ್ದ 1.50 ಕೋಟಿ ರೂ. ಹಣವನ್ನು ಜನರೇ ವಾಪಸ್ ಕಟ್ಟಿದ್ದಾರೆ. ಆ ಹಣ ಕೂಡ ಸರ್ಕಾರದಲ್ಲಿದೆ.
ಸತ್ಯನಾರಾಯಣ ವರ್ಮಾ, ಲ್ಯಾಂಬೋರ್ಗಿನಿ ಉರುಸ್ ಎಂಬ ಕಾರನ್ನು ಬಿಗ್‌ಬಾಯ್ಸ್ ಟಾಯ್ಸ್ ಕಂಪನಿ ಮೂಲಕ ಖರೀದಿ ಮಾಡಿದ್ದ. ಈಗ ಎಸ್‌ಐಟಿ ಆ ಕಾರನ್ನು ವಶಕ್ಕೆ ಪಡೆದಿದೆ. ಸದರಿ ಕಂಪನಿಯು ಕಾರನ್ನು ವಾಪಸ್ ಪಡೆದು 3,31,19,166 ರೂ. ಹಣವನ್ನು ಸರ್ಕಾರಕ್ಕೆ ಮರಳಿಸುವುದಾಗಿ ಸಂಬಂಧಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಸತ್ಯನಾರಾಯಣ ವರ್ಮಾ 1.21 ಕೋಟಿಗೂ ಹೆಚ್ಚು ಬೆಲೆಬಾಳುವ ಬೆಂಜ್ ಕಾರನ್ನು ಖರೀದಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಕಾರನ್ನು ಎಸ್‌ಐಟಿ ತನ್ನ ವಶಕ್ಕೆ ಪಡೆದಿದೆ. ಈ ಕಾರನ್ನೂ ಮರಳಿ ಕಂಪನಿಗೆ ನೀಡಿ ಅದರ ಮೌಲ್ಯವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದ್ದಾರೆ. ಅಕ್ರಮವಾಗಿ ವರ್ಗಾವಣೆಯಾಗಿದ್ದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ಎಸ್.ಟಿ ನಿಗಮದ ಖಾತೆಗೆ 5 ಕೋಟಿ ಮರಳಿಸಿರುತ್ತದೆ.
ಯೂನಿಯನ್ ಬ್ಯಾಂಕ್‌ನಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 46 ಕೋಟಿಗೂ ಹೆಚ್ಚು ಹಣ ರತ್ನಾಕರ್ ಬ್ಯಾಂಕ್‌ನಲ್ಲಿದೆ. ಈ ಹಣವನ್ನೂ ನಮ್ಮ ಎಸ್‌ಐಟಿ ತಂಡವು ಫ್ರೀಜ್ ಮಾಡಿದೆ. ಅದನ್ನು ಹಿಂಪಡೆಯುವ ಪ್ರಕ್ರಿಯೆ ಪ್ರಾರಂಭಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.