
ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2026-27ನೇ ಸಾಲಿನ ಬಜೆಟ್ ದಿಕ್ಕು ದೆಸೆ ಇಲ್ಲದ ಪ್ರಗತಿ ಶೂನ್ಯ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರವಾಗಿ ಟೀಕಿಸಿದ್ದಾರೆ.
ಈ ಬಜೆಟ್ ರಾಜ್ಯವನ್ನು ಸಾಲದ ಸುಳಿಗೆ ತಳ್ಳುವಂತಿದ್ದು, ಇದರಿಂದ ರಾಜ್ಯದ ಹಣಕಾಸಿನ ಸ್ಥಿತಿಗತಿಯ ಮೇಲೆ ದೀರ್ಘಕಾಲದ ಕೆಟ್ಟ ಪರಿಣಾಮ ಬೀರಲಿದೆ, ಸಾವಿರ ಕೋಟಿ ರೂಪಾಯಿಗಳ ಹೊಸ ತೆರಿಗೆಯನ್ನು ಜನಸಾಮಾನ್ಯರ ಮೇಲೆ ಹೇರಿರುವ ಈ ಬಜೆಟ್ ಅತ್ಯಂತ ಕಳಪೆಯಾಗಿದೆ 17 ಬಾರಿ ಬಜೆಟ್ ಮಂಡಿಸಿರುವ ಅನುಭವವಿರುವ ಸಿದ್ದರಾಮಯ್ಯ ಅವರಿಂದ ಇಂತಹ ನಿರಾಸಾದಾಯಕ ಬಜೆಟ್ ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಭಿವೃದ್ಧಿ ಕಾರ್ಯಗಳಿಗೆ ಈ ಬಜೆಟ್‌ನಲ್ಲಿ ಆದ್ಯತೆ ನೀಡಿಲ್ಲ , ನೀರಾವರಿ ಕ್ಷೇತ್ರಕ್ಕೆ ಕೇವಲ 22 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿರುವುದು ಸರಿಯಲ್ಲ . ಅದರಲ್ಲೂ ವಿಶೇಷವಾಗಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಕನಿಷ್ಠ 25 ಸಾವಿರ ಕೋಟಿ ರೂಪಾಯಿಗಳ ಅಗತ್ಯವಿತ್ತು, ಆದರೆ ಸರ್ಕಾರ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಪ್ರಮುಖ ಇಲಾಖೆಗಳಿಗೂ ಅನುದಾನ ಕಡಿತಗೊಳಿಸಲಾಗಿದೆ. ಈ ಬಜೆಟ್ ರಾಜ್ಯದ ಪ್ರಗತಿಯನ್ನು ಹತ್ತರಿಂದ ಹದಿನೈದು ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ. ಸರ್ಕಾರದ ಸಚಿವರ ನಡುವಿನ ಗೊಂದಲದಿಂದಾಗಿ ದಲಿತ ಸಮಾಜಕ್ಕೆ ಅನ್ಯಾಯವಾಗುತ್ತಿದೆ ಈಗಾಗಲೇ ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆಗೆ ಒಪ್ಪಿಗೆ ಪಡೆದು, ರಾಜ್ಯಪಾಲರ ಸಹಿ ಕೂಡ ಆಗಿದೆ. ಮೀಸಲಾತಿ ಪ್ರಮಾಣವನ್ನು 17% ಕ್ಕೆ ಏರಿಸಿ ಈಗ ಜಾರಿ ಮಾಡದೆ ಕುಂಟು ನೆಪ ಹೇಳುತ್ತಿರುವುದು ಸರಿಯಲ್ಲ. ನ್ಯಾಯಾಲಯವು ಯಾವುದೇ ತಡೆಯಾಜ್ಞೆ ನೀಡಿಲ್ಲದಿದ್ದರೂ ಸರ್ಕಾರ ಕಾಲಹರಣ ಮಾಡುತ್ತಿದೆ. ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿಗೊಳಿಸದಿದ್ದರೆ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.



