ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಘಮಘಮಿಸುವ ಬ್ಲ್ಯಾಕ್ ಕಾಫಿ ಕುಡಿದರೆ ಸಿಗುವ ಕಿಕ್ ಇನ್ಯಾವುದರಲ್ಲೂ ಇಲ್ಲ. ಫಿಟ್ನೆಸ್ ಫ್ರೀಕ್‌ಗಳಿಂದ ಹಿಡಿದು ಆಫೀಸ್ ಕೆಲಸದ ಒತ್ತಡದಲ್ಲಿರುವವರವರೆಗೆ ಬ್ಲ್ಯಾಕ್ ಕಾಫಿ ಒಂದು ಎನರ್ಜಿ ಬೂಸ್ಟರ್. ಆದರೆ, ನೀವು ಪ್ರತಿದಿನ ಕುಡಿಯುವ ಈ ಕಪ್ಪು ಕಾಫಿ ನಿಮ್ಮ ದೇಹದ ಮೇಲೆ ಅರಿಯದಂತೆ ಕೆಲವು ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ? ಅತಿಯಾದ ಬ್ಲ್ಯಾಕ್ ಕಾಫಿ ಸೇವನೆಯಿಂದ ಉಂಟಾಗುವ ಆ ‘ಹಡನ್’ ಸೈಡ್ ಎಫೆಕ್ಟ್‌ಗಳ ಮಾಹಿತಿ ಇಲ್ಲಿದೆ.

1. ಅತಿಯಾದ ಆತಂಕ ಮತ್ತು ನಡುಕ (Anxiety & Jitters): ಕಾಫಿಯಲ್ಲಿರುವ ಕೆಫೀನ್ ಮೆದುಳನ್ನು ಚುರುಕುಗೊಳಿಸುತ್ತದೆ ನಿಜ. ಆದರೆ ಅದರ ಪ್ರಮಾಣ ಹೆಚ್ಚಾದಾಗ ಅದು ‘ಅಡ್ರಿನಾಲಿನ್’ ಹಾರ್ಮೋನ್ ಅನ್ನು ಅತಿಯಾಗಿ ಬಿಡುಗಡೆ ಮಾಡುತ್ತದೆ. ಇದರಿಂದ ಕೈಕಾಲು ನಡುಗುವುದು, ಕಾರಣವಿಲ್ಲದೆ ಆತಂಕ ಅಥವಾ ಗಾಬರಿ ಉಂಟಾಗುವುದು ಮತ್ತು ಹೃದಯ ಬಡಿತ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
2. ಖಾಲಿ ಹೊಟ್ಟೆಯಲ್ಲಿ ಕುಡಿದರೆ ಆಸಿಡಿಟಿ ಗ್ಯಾರಂಟಿ: ಅನೇಕರು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಬ್ಲ್ಯಾಕ್ ಕಾಫಿ ಕುಡಿಯುತ್ತಾರೆ. ಇದು ಜಠರದಲ್ಲಿ ಆಮ್ಲದ (Acid) ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಎದೆಯುರಿ, ಗ್ಯಾಸ್ಟ್ರಿಕ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕಾಡಬಹುದು.

3. ನಿದ್ರೆಯ ಗುಣಮಟ್ಟ ಕುಸಿತ (Insomnia): ಕೆಫೀನ್ ದೇಹದಲ್ಲಿ ಸುಮಾರು 5-6 ಗಂಟೆಗಳ ಕಾಲ ಇರುತ್ತದೆ. ನೀವು ಸಂಜೆ ಅಥವಾ ರಾತ್ರಿ ಹೊತ್ತು ಬ್ಲ್ಯಾಕ್ ಕಾಫಿ ಕುಡಿದರೆ, ಅದು ನಿಮ್ಮ ಗಾಢ ನಿದ್ರೆಗೆ ಅಡ್ಡಿಪಡಿಸುತ್ತದೆ. ಇದರಿಂದ ಮರುದಿನ ಬೆಳಗ್ಗೆ ಎದ್ದಾಗ ಸುಸ್ತು ಮತ್ತು ಅರೆನಿದ್ರಾವಸ್ಥೆ ಕಾಡಬಹುದು.
4. ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿ: ಬ್ಲ್ಯಾಕ್ ಕಾಫಿ ಅತಿಯಾದರೆ ದೇಹವು ಆಹಾರದಲ್ಲಿರುವ ಕಬ್ಬಿಣ (Iron), ಕ್ಯಾಲ್ಸಿಯಂ ಮತ್ತು ಸತು (Zinc) ನಂತಹ ಪ್ರಮುಖ ಖನಿಜಗಳನ್ನು ಹೀರಿಕೊಳ್ಳಲು ಕಷ್ಟಪಡುತ್ತದೆ. ಇದು ದೀರ್ಘಕಾಲದವರೆಗೆ ಮುಂದುವರಿದರೆ ಮೂಳೆಗಳ ದೌರ್ಬಲ್ಯಕ್ಕೆ ಕಾರಣವಾಗಬಹುದು.
5. ನಿರ್ಜಲೀಕರಣದ ಸಮಸ್ಯೆ (Dehydration): ಬ್ಲ್ಯಾಕ್ ಕಾಫಿ ಒಂದು ‘ಡಯೂರೆಟಿಕ್’ (Diuretic) ಆಗಿ ಕಾರ್ಯನಿರ್ವಹಿಸುತ್ತದೆ, ಅಂದರೆ ಇದು ಪದೇ ಪದೇ ಮೂತ್ರ ವಿಸರ್ಜನೆಗೆ ಪ್ರೇರೇಪಿಸುತ್ತದೆ. ಇದರಿಂದ ದೇಹದಲ್ಲಿನ ನೀರಿನಂಶ ಕಡಿಮೆಯಾಗಿ ಚರ್ಮದ ಕಾಂತಿ ಕುಂದುವುದು ಮತ್ತು ತಲೆನೋವು ಕಾಣಿಸಿಕೊಳ್ಳಬಹುದು.

6. ಒತ್ತಡದ ಹಾರ್ಮೋನ್ ಹೆಚ್ಚಳ: ಕೆಫೀನ್ ದೇಹದಲ್ಲಿ ‘ಕಾರ್ಟಿಸೋಲ್’ ಎಂಬ ಒತ್ತಡದ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ನೀವು ಈಗಾಗಲೇ ಒತ್ತಡದಲ್ಲಿದ್ದರೆ, ಬ್ಲ್ಯಾಕ್ ಕಾಫಿ ಅದನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.
ಹಾಗೆಂದು ಬ್ಲ್ಯಾಕ್ ಕಾಫಿ ಕುಡಿಯುವುದನ್ನೇ ನಿಲ್ಲಿಸಬೇಕಿಲ್ಲ. ದಿನಕ್ಕೆ 2-3 ಕಪ್‌ಗಳಿಗೆ ಸೀಮಿತಗೊಳಿಸುವುದು ಮತ್ತು ಕಾಫಿಯ ಜೊತೆಗೆ ಸಮರ್ಪಕವಾಗಿ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಯಾವುದೂ ಮಿತವಾಗಿದ್ದರೆ ಹಿತ!


