ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೋ ಅದರಂತೆ ಕೇಳ್ತೇವೆ-ಸಿದ್ದರಾಮಯ್ಯ
ಬೆಳಗಾವಿ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಕುರ್ಚಿ ಕಾದಾಟದ ಬಿಸಿ ಮತ್ತೆ ಜೋರಾಗಿದೆ. ಸದನದಲ್ಲಿ ಸಿಎಂ ಬದಲಾವಣೆ ಬಗ್ಗೆ ನೀವೇ ಐದು ವರ್ಷ ಸಿಎಂ ಆಗಿರ್ತೀರಾ ಸರ್ ಎಂಬ ಆರ್.ಅಶೋಕ್ ಅವರ ಪ್ರಶ್ನೆಗೆ, ಹೈಕಮಾಂಡ್ ಹೇಳೋವರೆಗೂ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಉತ್ತರಿಸಿದ್ದಾರೆ.
ಕೃಷಿಪತ್ತಿನ ಸಹಕಾರ ಸಂಘಗಳಿಗೆ ಷೇರು ಧನ ಕೊಡುವ ವಿಚಾರದಲ್ಲಿ ತಾರತಮ್ಯ ಆಗಿದೆ ಎಂದು ಸದನದಲ್ಲಿ ಕುಣಿಗಲ್ ರಂಗನಾಥ್ ಪ್ರಶ್ನಿಸಿದ್ದರು. ರಂಗನಾಥ್ ಪ್ರಶ್ನೆಗೆ ಉತ್ತರ ಕೊಡ್ತಿದ್ದ ಸಿಎಂ, ರಂಗನಾಥ್ ನಮ್ಮ ಮೇಲೆ ವಿಶ್ವಾಸ ಇಡಿ. ತಾರತಮ್ಯ ಆಗಿದ್ರೆ ನಿಮ್ಮ ಸಮಸ್ಯೆ ಬಗೆಹರಿಸ್ತೇವೆ ಎಂದರು. ಈ ವೇಳೆ ಅಶೋಕ್ ಮಧ್ಯಪ್ರವೇಶಿಸಿ, ತಾರತಮ್ಯ ಬೇಕು ಅಂತ ಮಾಡಿದ್ದಾರೆ ಅಂದ್ರು. ಅದಕ್ಕೆ ಸಿಎಂ, ನೀವು ಉರಿಯುತ್ತಿರುವ ಬೆಂಕಿಗೆ ತುಪ್ಪ ಹಾಕಬೇಡ ಎಂದರು. ಹಾಗಾದ್ರೆ ಉರಿಯುತ್ತಿದೆಯಾ ನಿಮ್ಮಲ್ಲಿ ಅಂತ ಅಶೋಕ್ ಕೆಣಕಿದರು. ಅದು ಗಾದೆ ಕಣಯ್ಯ ಅಂತ ಸಿಎಂ ಸ್ಪಷ್ಟನೆ ಕೊಟ್ಟರು.
ಈ ವೇಳೆ ಅಶೋಕ್ ಮಾತನಾಡಿ, ಕುಣಿಗಲ್ ರಂಗನಾಥ್ ಅವರು ಡಿಕೆಶಿ ಸಿಎಂ ಆಗೋದಕ್ಕೆ ಪೂಜೆ, ಪುನಸ್ಕಾರ ಮಾಡ್ತಿದ್ದಾರೆ ಎಂದರು. ರಂಗನಾಥ್ ಮಾತನಾಡಿ, ಪೂಜೆ ಪುನಸ್ಕಾರ ಮಾಡ್ತಿರೋದು ನಮ್ಮ ಕ್ಷೇತ್ರಕ್ಕಾಗಿ ಎಂದರು. ಸಿಎಂ ಉರಿಯುತ್ತಿರೋದಕ್ಕೆ ತುಪ್ಪ ಹಾಕಬೇಡ ಅಂದ್ರು, ಅಲ್ಲಿಗೆ ಜಗಳ ಹೊತ್ತಿ ಉರೀತಿದೆ ಅಂತ ಅರ್ಥ ಎಂದು ಅಶೋಕ್ ಟಾಂಗ್ ಕೊಟ್ಟರು. ಗಾದೆ ಅದು, ನಿಮಗೆ ಗಾದೆ ಗೊತ್ತಿಲ್ಲ ಅಂದ್ರೆ ಏನ್ಮಾಡೋದು ಅಂತ ಸಿಎಂ ಸ್ಪಷ್ಟಪಡಿಸಿದರು.
ಸಿಎಂ ಸ್ಥಾನದ ಗೊಂದಲ ಬಗ್ಗೆ ಬಿಜೆಪಿ ಆರೋಪಗಳಿಗೆ ಸದನದಲ್ಲಿ ಸಿಎಂ ಸ್ಪಷ್ಟನೆ ನೀಡಿದರು. ನಮ್ಮಲ್ಲಿ ಹೈಕಮಾಂಡ್ ಇದೆ, ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೋ ಅದರಂತೆ ಕೇಳ್ತೇವೆ. ಜನ ನಮಗೆ ಆಶೀರ್ವಾದ ಮಾಡಿದ್ದಾರೆ, ಬಿಜೆಪಿವರಿಗೆ ಜನ ಆಶೀರ್ವಾದ ಮಾಡಲ್ಲ, ಇವರು ವಿಪಕ್ಷ ಸ್ಥಾನದಲ್ಲಿ ಶಾಶ್ವತವಾಗಿ ಇರ್ತಾರೆ ಅಂತ ಸಿಎಂ ಟಾಂಗ್ ಕೊಟ್ಟರು.
ಯತ್ನಾಳ್ ಮಾತನಾಡಿ, ಐದು ವರ್ಷ ಸಿಎಂ ಯಾರು ಅನ್ನೋದಷ್ಟೇ ಪ್ರಶ್ನೆ. ಸಿದ್ದರಾಮಯ್ಯ ಇರ್ತಾರೋ ಬೇರೆಯವ್ರು ಬರ್ತಾರೋ ಎಂದು ಪ್ರಶ್ನಿಸಿದರು. ಸುರೇಶ್ ಕುಮಾರ್ ಮಾತನಾಡಿ, ಇಷ್ಟು ದಿನ ಸಿಎಂ ನಾನೇ ಮುಂದುವರೀತೇನೆ ಅಂತಿದ್ರು. ಈಗ ಏಕವಚನದಿಂದ ಬಹುವಚನಕ್ಕೆ ಬಂದಿದ್ದಾರೆ. ನಾನು ಅನ್ನೋ ಕಡೆ ನಾವು ಅಂತಿದ್ದಾರೆ. ಪ್ರಾಯಶಹಃ ಕನಕದಾಸರು ಹೇಳಿದ್ದ ನಾನು ಹೋದಲ್ಲಿ ಮಾತ್ರ ಹೋಗುತ್ತೇನೆ ಅನ್ನೋದನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಕಾಲೆಳೆದರು.
ಸಿಎಂ ಪ್ರತಿಕ್ರಿಯಿಸಿ, ನಾನು ಹೋದರೆ ಹೋದೇನು… ಇದು ಕನಕದಾಸರು ಹೇಳಿರೋದು. ಕನಕದಾಸರಿಗೂ ನನಗೂ ಹೋಲಿಕೆ ಮಾಡಬೇಡಿ. ನಾವು ಸರ್ಕಾರದಲ್ಲಿ. ಇದು ಬಹುವಚನ. ನಾನೇ ಮುಖ್ಯಮಂತ್ರಿ, ಈಗಲೂ ಮುಖ್ಯಮಂತ್ರಿ ಎಂದರು.
ಸುನಿಲ್ ಕುಮಾರ್ ಎದ್ದುನಿಂತು, ನಾನೇ ಮುಂದಿನ ಐದು ವರ್ಷ ಸಿಎಂ ಅಂದಿದ್ರರಲ್ಲ ನೀವು ಈಗೇನಂತೀರಿ ಎಂದು ಪ್ರಶ್ನಿಸಿದರು. ಸಿಎಂ ಪ್ರತಿಕ್ರಿಯಿಸಿ, ನೀವ್ಯಾಕೆ ಮೂರು ಜನ ಸಿಎಂ ಮಾಡಿದ್ರಿ? ಈಗಲೂ ನಾನೇ ಮುಖ್ಯಮಂತ್ರಿ, ಈಗಲೂ ನಾನೇ ಮುಖ್ಯಮಂತ್ರಿ, ಮುಂದೇನೂ ಮುಖ್ಯಮಂತ್ರಿ. ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯಮಂತ್ರಿ ಎಂದು ಸಿಎಂ ಉತ್ತರ ಕೊಟ್ಟರು. ನೀವು ಯಾಕ್ರಿ ಮೂರು ಮೂರು ಸಿಎಂ ಬದಲಾಯಿಸಿದ್ರಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.


