ಮುಡಾ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ-ಜೆಡಿಎಸ್ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು ಎಂದು ಬಿಗಿ ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಸಚಿವರು ಮುಖ್ಯಮಂತ್ರಿಗಳ ಬೆನ್ನಿಗೆ ನಿಂತಿದ್ದಾರೆ. ರಾಜ್ಯದಾದ್ಯಂತ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯ ಅಪ್ಡೇಟ್ಸ್ ಇಲ್ಲಿವೆ.
ಬೆಂಗಳೂರು, ಸೆಪ್ಟೆಂಬರ್ 25: ಸಿಎಂ ಸಿದ್ದರಾಮಯ್ಯಗೆ ಮುಡಾ ಪ್ರಕರಣದ ತೂಗುಗತ್ತಿ ಮತ್ತಷ್ಟು ಚೂಪಾಗಿದ್ದು, ಸಿಎಂ ಕುರ್ಚಿ ಮೇಲೆಯೇ ನೇತಾಡುತ್ತಿದೆ. ಇದೇ ಅಸ್ತ್ರ ಮುಂದಿಟ್ಟಿರುವ ಜೆಡಿಎಸ್-ಬಿಜೆಪಿ ನಾಯಕರು ಸಿದ್ದರಾಮಯ್ಯ ರಾಜೀನಾಮೆಗೆ ಬಿಗಿ ಪಟ್ಟು ಬಿಗಿಹಿಡಿದಿದ್ದಾರೆ. ನೈತಿಕತೆಯ ಪ್ರಶ್ನೆ ಮಾಡುತ್ತಲೇ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಂತೂ ಮಂಗಳವಾರದಿಂದಲೇ ಅಲರ್ಟ್ ಆಗಿದ್ದಾರೆ. ಬುಧವಾರ ಕೂಡ ಯಾದಗಿರಿ, ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಬಿಜೆಪಿ ಮಾತ್ರವಲ್ಲ, ಜೆಡಿಎಸ್ ಕಾರ್ಯಕರ್ತರು ಕೂಡ ಬೀದಿಗಿಳಿದಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಹೋರಾಟ ನಡೆಸಿ, ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಇಷ್ಟೆ ಅಲ್ಲದೆ, ಸಿಎಂ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ಮೈಸೂರು ಲೋಕಾಯುಕ್ತ ಎಸ್ಪಿಗೆ ಜೆಡಿಎಸ್ ನಿಯೋಗ ದೂರು ಕೊಟ್ಟಿದೆ.
ಭಂಡತನ ಬದಿಗಿಡಿ, ರಾಜೀನಾಮೆ ಕೊಡಿ: ಬಿಜೆಪಿ ಆಗ್ರಹ
ಬಿಜೆಪಿ ನಾಯಕರಿಗೆ ಹೈಕೋರ್ಟ್ ತೀರ್ಪಿನಿಂದ ಕೊಂಚ ಮೇಲುಗೈಯಾಗಿದೆ. ಸಿಕ್ಕಿದ್ದೇ ಅವಕಾಶ ಎಂದು ಕೇಸರಿ ಕಲಿಗಳು ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು ಹಿಡಿದ್ದಾರೆ. ಸಿಎಂ ಸಮರ್ಥನೆ ವಿರೋಧಿಸುತ್ತಲೇ, ಭಂಡತನ ಬದಿಗಿಟ್ಟು ರಾಜೀನಾಮೆ ಕೊಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಇತರ ನಾಯಕರು ಆಗ್ರಹಿಸಿದ್ದಾರೆ.