ಮೈಸೂರು: ಇದಕ್ಕೆಲ್ಲ ನಾನು ಹೆದರುವುದಿಲ್ಲ, ನಾವು ಇದನ್ನೆಲ್ಲ ಎದುರಿಸಲು ಸಿದ್ಧರಾಗಿದ್ದೇವೆ. ತಪ್ಪು ಮಾಡಿದ್ದರೇ ತಾನೆ ಹೆದರೋದು. ಇದು ಮುಡಾ ಹಗರಣ ವಿಚಾರದಲ್ಲಿ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರ ಮನವಿಯ ಹಿನ್ನಲೆಯಲ್ಲಿ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಖಡಕ್ ಪ್ರತಿಕ್ರಿಯೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗ, ಜೆಡಿಎಸ್ ಮತ್ತು ಬಿಜೆಪಿಗಳ ಕೈಗೊಂಬೆಯಾಗಿ ವರ್ತಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ನಾನು 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರುವವನು.ಆದರೆ ನನ್ನ ಪಾತ್ರ ಇಲ್ಲದಿದ್ದರೂ ಸರ್ಕಾರ ಅಸ್ಥಿರ ಗೊಳಿಸುವುದಕ್ಕೆ ಯತ್ನಿಸಿದ್ದಾರೆ. ರಾಜ್ಯಪಾಲರಿಗೆ ಸಲಹೆ ನೀಡುವವರು ಯಾರು? ರಾಜಭವನ ಹಾಗೂ ರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜ್ಯಪಾಲರ ನೋಟಿಸ್ ಗೆ ನಾನ್ಯಾಕೆ ಹೆದರಲಿ. ಅಶೋಕ್ ಹೆದರಿರಬೇಕು, ಅವರಿಗೆ ಭಯ, ನನಗಲ್ಲ ಎಂದು ಖಡಕ್ ಆಗಿ ಹೇಳಿದರು. ಇದೇ ವೇಳೆ ತನ್ನ ವಿರುದ್ಧ ದೂರು ನೀಡಿರುವ ಟಿ.ಜೆ. ಅಬ್ರಹಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಅಬ್ರಹಾಂ ಒಬ್ಬ ಬ್ಲಾಕ್ ಮೇಲರ್ ಎಂದು ತೆಗಳಿದರು. ಜುಲೈ 26ಕ್ಕೆ ಬೆಳಿಗ್ಗೆ 11:30 ಕ್ಕೆ ರಾಜ್ಯಪಾಲರಿಗೆ ಅಬ್ರಹಾಂ ದೂರು ಕೊಡ್ತಾನೆ. ಆ ದೂರಿನ ಪರಾಮರ್ಶೆ ಮಾಡದೇ ಆ ದಿನ ಸಂಜೆಯೇ, ಶೋಕಾಸ್ ನೋಟಿಸ್ ರೆಡಿ ಇದೆ ಬಂದು ಪಡೆದುಕೊಳ್ಳಿ ಎಂದು ನಮ್ಮ ಅಧಿಕಾರಿ ಎಲ್ ಕೆ ಅತೀಕ್ ಗೆ ಹೇಳಿದ್ದಾರೆ ಎಂದು ದೂರಿದರು.